ಮೈಸೂರಿನಲ್ಲಿ ಅರಸು ಭವನ ನಿರ್ಮಾಣವಾಗಲಿ

mysore
Published on

ಮೈಸೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಸ್ಮರಣಾರ್ಥ ನಗರದಲ್ಲಿ ಅರಸು ಭವನ ನಿರ್ಮಿಸಬೇಕು ಎಂದು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಹೇಳಿದರು.


ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯು ಜೆಎಸ್‌ಎಸ್ ಆಸ್ಪತ್ರೆ ಆವರಣದ ರಾಜೇಂದ್ರಭವನದಲ್ಲಿ ಏರ್ಪಡಿಸಿದ್ದ ಅರಸು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಅರಸು ಭವನ ನಿರ್ಮಿಸಬೇಕು. ಅದರಲ್ಲಿ ಸಾಮಾಜಿಕ ಚಿಂತನೆ ಬಗ್ಗೆ ಅಧ್ಯಯನ ನಡೆಯಬೇಕು ಎಂದರು.


ಬಡತನ ಮತ್ತು ಶೋಷಣೆ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯ ನೀಡಿದವರು ಅರಸು. ಬಡವರು ಮತ್ತು ಶೋಷಿತರು ವಿಧಾನಸೌಧದ ಮೆಟ್ಟಿಲು ಹತ್ತುವ ಕನಸನ್ನು ಕಾಣದಿದ್ದ ಸಂದರ್ಭದಲ್ಲಿ ಜತೆಯಾಗಿ ಕೈಹಿಡಿದು ಕರೆದುಕೊಂಡು ಹೋಗಿ, ಸಾಮಾಜಿಕ ನ್ಯಾಯ ನೀಡಿದವರು. ಅವರ ಕಗ್ಗತ್ತಲಿನ ಬದುಕಿಗೆ ಬೆಳಕು ತೋರಿದರು. ಹೀಗಾಗಿ ಅವರನ್ನು ಕನ್ನಡನಾಡು ಯಾವಾಗಲೂ ಸ್ಮರಿಸಬೇಕು ಎಂದರು.


ಅರಸು ಅವರು ಭೂಸುಧಾರಣೆ ಕಾನೂನು ಜಾರಿಗೆ ತಂದರು. ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿದರು. ವೃದ್ಧರು, ಅಂಗವಿಕಲರು, ವಿಧವೆಯರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ್ದು ಅರಸು ಅವರು. ಈ ಮೀಸಲಾತಿಯಿಂದಾಗಿಯೇ ಹಿಂದುಳಿದ ಲಕ್ಷಾಂತರ ಜನರು ಶಿಕ್ಷಣ ಮತ್ತು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ ಎಂದರು.


ಹಿಂದುಳಿದ ವರ್ಗಗಳ ವಸತಿ ನಿಲಯ ಸ್ಥಾಪನೆ ಅರಸು ಅವರ ಕೊಡುಗೆಯಾಗಿದೆ. ಓದುವ ಶಾಲೆಗಳು ಹಾಗೂ ವಾಸಿಸುವ ವಿದ್ಯಾರ್ಥಿನಿಲಯಗಳು ದೇವಸ್ಥಾನಗಳಿದ್ದಂತೆ. ಪ್ರತಿಯೊಬ್ಬ ವಿದ್ಯಾರ್ಥಿಯು ಅರಸು ಅವರ ತತ್ವ ಮತ್ತು ಆದರ್ಶ ಪಾಲಿಸಬೇಕು ಎಂದರು.


ಅರಸು ಅವರು ಯಾವುದೇ ಜಾತಿಯ ವಿರೋಧಿಗಳಾಗಿರಲಿಲ್ಲ. ಆದರೆ ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇದ್ದವರು. ಅಂದಿನ ಮುಖ್ಯಮಂತ್ರಿ ಅರಸು ಹಾಗೂ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಹಲವಾರು ಸಾಮ್ಯತೆಗಳಿವೆ. ಅವುಗಳಲ್ಲಿ ಸಾಮಾಜಿಕ ನ್ಯಾಯವೂ ಒಂದು. ಅರಸು ಅವರಂತೆ ಸಿದ್ದರಾಮಯ್ಯ ಅವರು ಕೂಡ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿ, ಬಡವರ ಬದುಕಿಗೆ ಆಧಾರ ಕಲ್ಪಿಸಿದ್ದಾರೆ ಎಂದು ಅವರು ಹೇಳಿದರು.


ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಅರಸು ಅವರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಪ್ರಪಂಚದ ಕೆಲವೆಡೆ ನಡೆಯುತ್ತಿರುವ ಯುದ್ಧ ವಿರೋಧಿಸಿ, ಶಾಂತಿ ನೆಲೆಸುವಂತೆ ಮಾಡಬೇಕು ಎಂದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಪ್ರತಿಷ್ಠಾಪನಾ ಸಮಿತಿಯ ಗೌರವ ಸಲಹೆಗಾರ ಡಾ.ವೈ.ಡಿ. ರಾಜಣ್ಣ, ಗೌರವಾಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿದರು.


ಅರಸು ಅವರ ಸಾಮಾಜಿಕ ಸುಧಾರಣೆಗಳು ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕುವೆಂಪುನಗರ ಬಿಸಿಎಂ ಹಾಸ್ಟೆಲ್‌ನ ಕೆ.ವಿ. ಪ್ರಣತಿ, ರಾಜರಾಜೇಶ್ವರಿ ನಗರ ಬಿಸಿಎಂ ಹಾಸ್ಟೆಲ್‌ನ ಎಸ್. ರಮ್ಯಾ ಹಾಗೂ ದಟ್ಟಗಳ್ಳಿ ಬಿಸಿಎಂ ಹಾಸ್ಟೆಲ್‌ನ ಕೆ.ಎಸ್. ಪಾರ್ವತಮ್ಮ ಅವರಿಗೆ ಮೊದಲ ಮೂರು ಬಹುಮಾನ ವಿತರಿಸಲಾಯಿತು. ಭಾಗವಹಿಸಿದ್ದ ಎಲ್ಲ 210 ವಿದ್ಯಾರ್ಥಿನಿಯರಿಗೂ ಪ್ರಶಸ್ತಿ ಪತ್ರ ನೀಡಲಾಯಿತು.


ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಿತಿಯ ಪದಾಧಿಕಾರಿಗಳಾದ ಜಾಕೀರ್ ಹುಸೇನ್, ಡೇರಿ ವೆಂಕಟೇಶ್, ರದಿವುಲ್ಲಾಖಾನ್, ಮೈಸೂರು ಬಸವಣ್ಣ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net