ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಆಸ್ತಿ ನೋಂದಣಿಗೆ ಮಾರ್ಚ್ 1ರಿಂದ ಇಸ್ವತ್ತು ಕಡ್ಡಾಯ ಮಾಡಲಾಗಿದ್ದು, ನೋಂದಣಿ ಪ್ರಕ್ರಿಯೆ ಕುಂಠಿತಗೊಂಡಿದೆ.

ಮಾ. 1ರಂದು ಸರ್ಕಾರಿ ನೌಕರರ ಮುಷ್ಕರ ಇದ್ದಿದ್ದರಿಂದ ಕಚೇರಿಗಳು ಬಂದ್ ಇದ್ದವು. ಆದರೆ, ಗುರುವಾರ ಬೆಳಗ್ಗೆ ಎಂದಿನಂತೆ ಆಸ್ತಿ ನೋಂದಣಿಗೆ ಬಂದಿದ್ದ ಜನರಿಗೆ ಏಕಾಏಕಿ ಎದುರಾದ ಇಸ್ವತ್ತು ಕಡ್ಡಾಯ ನಿಯಮ ದಿಗಿಲು ತಂದಿತ್ತು.

ಕೃಷಿ ಜಮೀನು ಹೊರತುಪಡಿಸಿ ಯಾವುದೇ ಆಸ್ತಿ ನೋಂದಣಿಗೆ ಇಸ್ವತ್ತು ದಾಖಲೀಕರಣ ತರುವುದನ್ನು ಉಪನೋಂದಣಾಧಿಕಾರಿ ಕಚೇರಿ ಅಧಿಕಾರಿಗಳು ಕಡ್ಡಾಯಗೊಳಿಸಿದ್ದಾರೆ. ಇದನ್ನು ಮಹಾನಗರ ಪಾಲಿಕೆಯಿಂದ ತರಬೇಕಾಗುತ್ತದೆ. ಆದರೆ, ಮಹಾನಗರ ಪಾಲಿಕೆಯಲ್ಲಿ ಇಸ್ವತ್ತು ದಾಖಲಿಕರಣಕ್ಕೆ ಹತ್ತಾರು ಅಡೆತಡೆಗಳು ಎದುರಾಗಿವೆ. ಸಮರ್ಪಕ ದಾಖಲೆ ಇಲ್ಲದ ಕಾರಣಕ್ಕೆ ಸುಲಭವಾಗಿ ಇಸ್ವತ್ತು ಆಗುತ್ತಿಲ್ಲ. ಎಲ್ಲ ದಾಖಲೆ ಕೊಟ್ಟರೂ ಪಾಲಿಕೆಯ ಕೆಲ ಅಧಿಕಾರಿಗಳು ಮಾಡಿ ಕೊಡುತ್ತಿಲ್ಲ. ಜನರನ್ನು ಅನಗತ್ಯವಾಗಿ ಸತಾಯಿಸುತ್ತಿದ್ದಾರೆ ಎಂಬ ದೂರುಗಳು ಇವೆ.

ಇದರಿಂದಾಗಿ ಇಸ್ವತ್ತು ಇಲ್ಲದೇ ನೋಂದಣಿಗೆ ಹೋಗಿದ್ದ ಅನೇಕ ಜನರು ಇಂದು ಬರಿಗೈಯಲ್ಲಿ ವಾಪಸ್ ಹೋಗುವಂತಾಯಿತು. ನೋಂದಣಿ ಕಚೇರಿಗೆ ಬೇರೆಬೇರೆ ಊರುಗಳಿಂದ ಬಂದಿದ್ದ ಜನರು ಪರದಾಡುವಂತಾಯಿತು. ಮಾತ್ರವಲ್ಲ, ನೋಂದಣಿ ಕಡಿಮೆಯಾಗಿದ್ದರಿಂದ ಸರ್ಕಾರದ ಆದಾಯಕ್ಕೂ ಕತ್ತರಿ ಬಿದ್ದಂತಾಯಿತು ಎಂದು ಸಾರ್ವಜನಿಕರು ದೂರಿದರು.

ಮುನ್ಸೂಚನೆ ಇಲ್ಲದೇ ಇಸ್ವತ್ತು ಕಡ್ಡಾಯ ಮಾಡಿರುವುದು ಸರಿಯಲ್ಲ. ಇದರಿಂದ ಅನಾನುಕೂಲಗಳು ಬಹಳ ಇವೆ. ಅಧಿಕಾರಿಗಳು ಎಸಿ ಕೊಠಡಿಯಲ್ಲಿ ಕುಳಿತು ಏಕಾಏಕಿ ನಿಯಮ ಮಾಡಬಾರದು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

ಧಾರವಾಡ ಜಿಲ್ಲಾಡಳಿತದ ಸೂಚನೆ ಮೇರೆ ಆಸ್ತಿ ನೋಂದಣಿಗೆ ಇಸ್ವತ್ತು ದಾಖಲಿಕರಣವನ್ನು ಮಾರ್ಚ್ 1ರಿಂದ ಕಡ್ಡಾಯಗೊಳಿಸಲಾಗಿದೆ. ನಿತ್ಯ ಸುಮಾರು 50-60 ಆಸ್ತಿ ನೋಂದಣಿ ಆಗುತ್ತದೆ. ಆದರೆ, ಇಸ್ವತ್ತು ದಾಖಲೆ ಇಲ್ಲದೇ ಇವತ್ತು ಕೆಲವರು ವಾಪಸ್ ಹೋಗಿದ್ದಾರೆ. ಇನ್ನೆರಡು ದಿನ ವಹಿವಾಟು ಗಮನಿಸಿ ಆದಾಯ ಕಡಿಮೆಯಾದರೆ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಉಪನೋಂದಣಾಧಿಕಾರಿ ಎಸ್.ಬಿ. ಕೋಟಿ ಪ್ರತಿಕ್ರಿಯಿಸಿದರು.