

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿಯ ಪುನರ್ ನಿರ್ಮಾಣ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.
ಜೆಟ್ಟಿ ಕಾಮಗಾರಿ ಸ್ಥಗಿತಗೊಂಡು ಸುಮಾರು 3 ವರ್ಷಗಳ ಬಳಿಕ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿದ್ದು, ಪ್ರಸ್ತುತ ವರ್ಷದೊಳಗೆ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕುಸಿದು ಬಿದ್ದಿರುವ ಜೆಟ್ಟಿ ಪ್ರದೇಶದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವ ಕಾರ್ಯ ಆರಂಭಗೊಂಡಿದ್ದು, ಕುಸಿದು ಬಿದ್ದಿರುವ ಸ್ಲಾೃಬ್ ತೆರವುಗೊಳಿಸಲಾಗಿದೆ. ಹಳೇ ಪಿಲ್ಲರ್‌ಗಳನ್ನು ಯಥಾಸ್ಥಿತಿಯಲ್ಲಿ ಇಟ್ಟುಕೊಂಡು ಮಧ್ಯದಲ್ಲಿ ಹೊಸ ಪಿಲ್ಲರ್ ಅಳವಡಿಸಿ ಜೆಟ್ಟಿ ನಿರ್ಮಿಸಲಾಗುತ್ತಿದೆ. ವಾರದೊಳಗೆ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದ್ದು, ಆದರೆ ಸರ್ಕಾರ ಮಾತ್ರ ಇನ್ನೂ ಅನುದಾನ ಮಂಜೂರು ಮಾಡಿಲ್ಲ. ಹಿಂದಿನ ಅನುದಾನದಲ್ಲೇ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚನೆ ದೊರೆತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಮೂರು ವರ್ಷಗಳ ಹಿಂದೆ ಹಳೆ ಜೆಟ್ಟಿಯ ಕಾಂಕ್ರೀಟ್ ಸ್ಲಾೃಬ್ ಹಾಗೂ ಡಯಾ-ಫ್ರಾಮ್ ವಾಲ್ ಕುಸಿದು ಬಿದ್ದು ಹೊಸ ಜೆಟ್ಟಿ ಕಾಮಗಾರಿಗೆ ಹಾನಿಯುಂಟಾಗಿತ್ತು. ಇದರಿಂದ ಮೀನುಗಾರರು ಕಂಗಾಲಾಗಿದ್ದು, ಬೋಟ್ ಮತ್ತು ದೋಣಿ ನಿಲ್ಲಿಸಲು ಸ್ಥಳಾವಕಾಶ ಕೊರತೆ ಎದುರಾಗಿತ್ತು. ಜೆಟ್ಟಿ ಪ್ರದೇಶ ಮತ್ತಷ್ಟು ಕುಸಿ ತಡೆಯಲು ಪ್ರತಿವರ್ಷ ಮಳೆಗಾಲದಲ್ಲಿ ಮರಳು ಚೀಲಗಳನ್ನು ಪೇರಿಸಿ ಇಡಲಾಗುತ್ತಿತ್ತು.
ಕಿರು ಬಂದರಿನ ಮೂಲ ಜೆಟ್ಟಿ 405 ಮೀ. ಉದ್ದವಿದ್ದು, 210 ಮೀ. ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 160 ಮೀ. ಉದ್ದದ ಜೆಟ್ಟಿ ಪ್ರದೇಶದಲ್ಲಿ ಪಿಲ್ಲರ್ ಅಳವಡಿಕೆ ಕಾರ್ಯ ನಡೆಯುತ್ತಿದ್ದ ಸಂದರ್ಭ ಜೆಟ್ಟಿ ಕುಸಿತಕ್ಕೊಳಗಾಗಿತ್ತು. ಗಂಗೊಳ್ಳಿಯಲ್ಲಿ 50 ಪರ್ಸಿನ್ ಬೋಟ್, 150 ನಾಡದೋಣಿಗಳು, 250 ಟ್ರಾಲ್‌ಬೋಟ್, 100ಕ್ಕಿಂತ ಹೆಚ್ಚು ಕಂಟ್ಲಿ ದೋಣಿಗಳಿವೆ.
ಜೆಟ್ಟಿ ಕಾಮಗಾರಿ ಸ್ಥಗಿತಗೊಂಡು ಮೂರು ವರ್ಷಗಳ ಬಳಿಕ ಕಾಮಗಾರಿ ಮತ್ತೆ ಆರಂಭಗೊಂಡಿದೆ. ಇದರಿಂದ ಮೀನುಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ವಾರದೊಳಗೆ ಕಾಮಗಾರಿ ಪ್ರಾರಂಭವಾಗಲಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಂಡು ಉತ್ತಮ ದರ್ಜೆಯ ಜೆಟ್ಟಿ ನಿರ್ಮಾಣವಾಗಬೇಕಿದೆ-ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ