

ಮಡಿಕೇರಿ:
ಕಾಫಿ ಎಸ್ಟೇಟ್‌ಗಳಲ್ಲಿ ಯಥೇಚ್ಛ ಆಹಾರ, ನೀರು ಸಿಗುವುದರಿಂದ ಇವುಗಳನ್ನು ಆನೆಗಳು ತಮ್ಮ ವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿವೆ. ಇದರಿಂದಾಗಿಯೇ ಆನೆ, ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆನೆಗಳ ಹಾವಳಿ ಕಂಡುಬರುತ್ತಿದ್ದಂತೆಯೇ ಓಡಿಸಲು ಮುಂದಾದರೆ ಅವು ಪಕ್ಕದ ಮತ್ತೊಂದು ತೋಟದಲ್ಲಿ ಆಶ್ರಯ ಪಡೆಯುತ್ತವೆ. ಆನೆಗಳ ಜನಗಣತಿ ೨೦೨೩ರ ಮಧ್ಯಂತರ ವರದಿ ಪ್ರಕಾರ ಎಸ್ಟೇಟ್ ಸೇರಿದಂತೆ ಖಾಸಗಿ ಜಾಗಗಳಲ್ಲಿ ೧೬೧ ಆನೆಗಳು ಕಂಡು ಬಂದಿದೆ.
ರಾಜ್ಯದಲ್ಲಿ ಕಂಡು ಬರುವ ಆನೆಗಳಲ್ಲಿ ಹೊಸದೊಂದು ಪ್ರಬೇಧ ಸೃಷ್ಟಿಯಾಗಿದೆ. ಎಸ್ಟೇಟ್‌ಗಳಲ್ಲಿ ಆಶ್ರಯ ಪಡೆದುಕೊಂಡಿರುವ ಆನೆಗಳು ಇಲ್ಲಿಯೇ ತಮ್ಮ ಸಂತಾನ ಬೆಳೆಸುತ್ತಿದ್ದು ಈ ಆನೆಗಳ ಈಗಿನ ತಲೆಮಾರು ಅರಣ್ಯದ ಕಡೆ ತಲೆಯನ್ನೇ ಹಾಕುತ್ತಿಲ್ಲ. ಕಾಡಿನ ಸಂಬಂಧ ಕಡಿದುಕೊಂಡಿರುವ ಈ ಆನೆಗಳಿಗೆ ಕಾಫಿ ತೋಟಗಳೇ ವಾಸ ಸ್ಥಾನಗಳಾಗಿವೆ. ಎಸ್ಟೇಟ್ ಒಳಗೆ ತಿರುಗಾಡುತ್ತಾ, ಇಲ್ಲಿಯೇ ಆಹಾರ, ನೀರು ಸೇವಿಸುತ್ತಾ ಕಾಫಿತೋಟದ ಒಳಗೆ ತಮ್ಮ ಸಂತಾನ ಬೆಳೆಸುತ್ತಾ ಎಸ್ಟೇಟ್ ಆನೆಗಳಾಗಿ ರೂಪುಗೊಂಡಿವೆ. ಇದೇ ಕಾರಣಕ್ಕೆ ಆನೆ ಮಾನವ ಸಂಘರ್ಷ ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ಇದರಿಂದಾಗಿ ಮನುಷ್ಯರಿಗೆ ಮಾತ್ರ ಹಾನಿ ಆಗುತ್ತಿಲ್ಲ. ಆನೆಗಳ ಅಮೂಲ್ಯ ಪ್ರಾಣವೂ ನಷ್ಟ ಆಗುತ್ತಿದೆ.
ಆನೆಗಳ ಜನಗಣತಿ ೨೦೨೩ರ ಮಧ್ಯಂತರ ವರದಿ ಪ್ರಕಾರ ಕರ್ನಾಟಕದಲ್ಲಿ ಅಂದಾಜು ೬,೩೯೫ ಆನೆಗಳಿವೆ. ಕೊಡಗಿನಲ್ಲಿ ಮಡಿಕೇರಿ, ಮಡಿಕೇರಿ ವನ್ಯಜೀವಿ, ವಿರಾಜಪೇಟೆ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ವಿಭಾಗ ಸೇರಿದಂತೆ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ಗಣತಿ ನಡೆದಿದ್ದು ನಾಗರಹೊಳೆಯಲ್ಲಿ ಒಟ್ಟು ೭೮೭ ಆನೆಗಳು ಕಾಣಿಸಿಕೊಂಡಿದ್ದರೆ, ಮಡಿಕೇರಿ ವಿಭಾಗದಲ್ಲಿ ೧೭೯ ಆನೆಗಳು ದಾಖಲಾಗಿವೆ. ಮಡಿಕೇರಿ ವಿಭಾಗದ ವ್ಯಾಪ್ತಿಗೆ ಬರುವ ಕುಶಾಲನಗರ ಸಮೀಪದ ಆನೆಕಾಡು ಪ್ರದೇಶವೊಂದರಲ್ಲೇ ೧೧೬ ಕಾಡಾನೆಗಳಿವೆ. ವಿರಾಜಪೇಟೆಯಲ್ಲಿ ೭೩ ಮತ್ತು ಮತ್ತು ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ ೬೪ ಆನೆಗಳಿವೆ. ಕೊಡಗಿನ ೧.೧೫ ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಗಣತಿಯನ್ನು ನಡೆಸಲಾಗಿತ್ತು.
ಆನೆ ಗಣತಿ ಸಂದರ್ಭ ಕಾಫಿ ಎಸ್ಟೇಟ್‌ಗಳಲ್ಲಿ ೧೬೧ ಆನೆಗಳು ಕಂಡುಬಂದಿದೆ. ಈ ಸಂಖ್ಯೆ ಇನ್ನೂ ಹೆಚ್ಚು ಇರುವ ಸಾಧ್ಯತೆಗಳಿವೆ. ಕಾಫಿ ಎಸ್ಟೇಟ್‌ಗಳಲ್ಲಿ ಪ್ರತ್ಯೇಕವಾಗಿ ಗಣತಿ ಕಾರ್ಯ ನಡೆಸಿದರೆ ಕಾಫಿ ತೋಟಗಳಲ್ಲಿ ಆಶ್ರಯ ಪಡೆದುಕೊಂಡಿರುವ ಆನೆಗಳ ನಿಖರ ಸಂಖ್ಯೆ ಸಿಗಲಿದೆ. ಎಸ್ಟೇಟ್‌ಗಳಲ್ಲಿ ವಾಸ ಮಾಡುತ್ತಿರುವ ಆನೆಗಳ ಸರಿಯಾದ ಸಂಖ್ಯೆ ಲಭ್ಯವಾದರೆ ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವ ದಾರಿ ಹುಡುಕಲು ಸುಲಭವಾಗಲಿದೆ ಎನ್ನುವುದು ಆನೆಪ್ರಿಯರ ಅಭಿಪ್ರಾಯ.
ಕೊಡಗಿನ ಅರಣ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಆನೆಗಳು ಇವೆಯೋ ಅಂದಾಜು ಅಷ್ಟೇ ಪ್ರಮಾಣದಲ್ಲಿ ಕಾಫಿ ತೋಟಗಳಲ್ಲಿಯೂ ಆನೆಗಳು ವಾಸವಾಗಿವೆ ಎನ್ನಲಾಗುತ್ತಿದೆ. ಮಳೆ ಕಡಿಮೆಯಾಗಿ ಆನೆಗಳಿಗೆ ಕಾಡಿನೊಳಗೆ ಆಹಾರ ಮತ್ತು ನೀರಿನ ಅಭಾವ ಇರುವ ಕಾರಣದಿಂದ ಆನೆಗಳು ಕಾಫಿ ತೋಟದ ಕಡೆಗೆ ಆಕರ್ಷಿತವಾಗುತ್ತಿವೆ. ಒಮ್ಮೆ ಎಸ್ಟೇಟ್‌ಗಳಲ್ಲಿ ಸಿಗುವ ಆಹಾರದ ರುಚಿ ನೋಡಿದರೆ ಇವುಗಳು ಮತ್ತೆ ಕಾಡಿನ ಕಡೆಗೆ ಮರಳುವ ಮನಸ್ಸು ಮಾಡುವುದಿಲ್ಲ. ಎಸ್ಟೇಟ್‌ಗಳಲ್ಲಿ ಋತುಗಳಿಗೆ ಅನುಗುಣವಾಗಿ ಹಲಸಿನಹಣ್ಣು, ಬಾಳೆ ಹಣ್ಣು, ಬಾಳೆ ಗಿಡ, ಬಿದಿರು, ಕಬ್ಬು, ಹುಲ್ಲು ಹೀಗೆ ವೈವಿಧ್ಯಮಯ ಆಹಾರಗಳು ಸಿಗುತ್ತದೆ. ತೋಟದೊಳಗಿನ ಕೆರೆಗಳಲ್ಲಿ ಯಥೇಚ್ಛ ನೀರು ಕೂಡ ಲಭ್ಯವಿರುತ್ತದೆ. ಹಾಗಾಗಿ ಕಾಡಾನೆಗಳು ಎಸ್ಟೇಟ್ ಆನೆಗಳಾಗಿ ಪರಿವರ್ತನೆ ಆಗುತ್ತಿವೆ.
ಕಾಡಾನೆಗಳ ಬಹುತೇಕ ಅಸಹಜ ಸಾವುಗಳು ಎಸ್ಟೇಟ್‌ಗಳಲ್ಲಿ ಸಂಭವಿಸಿರುವುದು ಗಮನಾರ್ಹ. ವಿದ್ಯುತ್ ಶಾಕ್, ಗುಂಡೇಟು, ಕೆರೆಗೆ ಬಿದ್ದು.. ಹೀಗೆ ವಿವಿಧ ರೀತಿಯಲ್ಲಿ ಆನೆಗಳು ಕಾಫಿ ತೋಟಗಳಲ್ಲಿ ಮೃತಪಟ್ಟಿವೆ. ಹಾಗೆಯೇ ಮನುಷ್ಯರ ಮೇಲೆ ಹೆಚ್ಚಿನ ಕಾಡಾನೆ ದಾಳಿಗಳು ಕೂಡ ಕಾಫಿ ತೋಟದ ಒಳಗಡೆಯೇ ನಡೆದಿದೆ. ವಿವಿಧ ಕಾರಣಕ್ಕೆ ತೋಟಗಳಿಗೆ ತೆರಳುವ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳಿಗೆ ಬಲಿಯಾಗಿದ್ದಾರೆ. ಕಾಡಾನೆಗಳು ಕಾಫಿ ತೋಟದೊಳಗೆ ಆಶ್ರಯ ಪಡೆಯುತ್ತಿರುವುದು ಆನೆ ಮತ್ತು ಮಾನವ ಇಬ್ಬರ ದೃಷ್ಟಿಯಿಂದಲೂ ಸುರಕ್ಷಿತ ಅಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಫಿ ತೋಟಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದಂತೆಯೇ ಅವುಗಳನ್ನು ಮರಳಿ ಕಾಡಿಗೆ ಅಟ್ಟಲು ಸ್ಥಳೀಯರಿಂದ ಒತ್ತಾಯ ಕೇಳಿ ಬರುತ್ತದೆ. ಈ ಬೆನ್ನಲ್ಲೇ ರಂಗಕ್ಕೆ ಇಳಿಯುವ ಅರಣ್ಯ ಇಲಾಖೆ ಆನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸುತ್ತದೆ. ಆದರೆ ಕಾಡಿಗೆ ಮರಳದ ಆನೆಗಳು ಸ್ವಲ್ಪ ದೂರದ ಮತ್ತೊಂದು ಎಸ್ಟೇಟ್‌ನಲ್ಲಿ ಆಶ್ರಯ ಪಡೆಯುತ್ತವೆ. ಅಲ್ಲಿಂದ ಓಡಿಸಿದರೆ ಇನ್ನೊಂದು ಎಸ್ಟೇಟ್ ಕಡೆಗೆ ತೆರಳುತ್ತವೆ. ಈ ಸಮಸ್ಯೆಗೆ ಶ್ವಾಶ್ವತ ಪರಿಹಾರ ಕಂಡುಹುಡುಕಿದರೆ ಮಾತ್ರ ಎಸ್ಟೇಟ್ ಆನೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎನ್ನುವುದು ಪರಿಸರ ಪ್ರಿಯರ ಅಭಿಪ್ರಾಯ.
ಆನೆಗಳು ರಕ್ಷಿತ ಅರಣ್ಯದಲ್ಲಿ ಇರುವುದೇ ಆನೆ ಮತ್ತು ಮಾನವನಿಗೆ ಹೆಚ್ಚು ಸುರಕ್ಷಿತ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅರಣ್ಯದಂಚಿನಲ್ಲಿ ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ, ಕಂದಕಗಳ ನಿರ್ಮಾಣ, ಸೌರ ಬೇಲಿಗಳು, ಹ್ಯಾಂಗಿಂಗ್ ಫೆನ್ಸ್ ಅಳವಡಿಕೆ ಸೇರಿ ಹಲವು ರೀತಿಯಲ್ಲಿ ಆನೆಗಳನ್ನು ಕಾಡಿನೊಳಗೆಯೇ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಆದರೆ ಕಾಡೊಳಗೆ ಆಹಾರ ಮತ್ತು ನೀರಿನ ಕೊರತೆ ಆನೆಗಳನ್ನು ತೋಟದ ಕಡೆಗೆ ಸೆಳೆಯುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯೋಚಿಸುವ ಅಗತ್ಯವಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಆನೆಗಣತಿ ೨೦೨೩ರ ಪ್ರಕಾರ ಕರ್ನಾಟಕದಲ್ಲಿ ಒಟ್ಟು ೬,೩೯೫ ಆನೆಗಳಿವೆ. ಈ ಪೈಕಿ ಸುಮಾರು ೧೬೧ ವ್ಯಕ್ತಿಗಳು ಕಾಫಿ ಎಸ್ಟೇಟ್‌ಗಳಂತಹ ಖಾಸಗಿ ಜಮೀನುಗಳಲ್ಲಿ ಕಾಣಿಸಿಕೊಂಡಿವೆ. ಈ ಖಾಸಗಿ ಭೂಮಿಗಳು ಆನೆಗಳಿಗೆ ಹೆಚ್ಚುವರಿ ಆವಾಸ ಸ್ಥಾನಗಳಾಗಿ ಕಾರ್ಯನಿರ್ವಹಿಸಬಹುದು, ಆದರೆ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಹಬಾಳ್ವೆಗೆ ಸವಾಲುಗಳನ್ನು ಒಡ್ಡುವ ಸಾಧ್ಯತೆಗಳೂ ಇವೆ. ಹಾಗಾಗಿ ಆನೆ, ಮಾನವ ಸಂಘರ್ಷ ತಡೆಗಟ್ಟಲು ಹೆಚ್ಚಿನ ಆದ್ಯತೆ ನೀಡಲಾಗುವುದು.
ಈಶ್ವರ ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ