ಮಾಣಿಕ್ಯನಹಳ್ಳಿಯಲ್ಲಿ ಸಂತಾನ ಲಕ್ಷ್ಮೀ ಅಮ್ಮನವರ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ

7PP-3
Published on

ಪಾಂಡವಪುರ: ಕೆಲವೇ ವರ್ಷಗಳಲ್ಲಿ ಹಲವು ರಾಷ್ಟ್ರಗಳು ಆರ್ಥಿಕವಾಗಿ ಸದೃಢವಾಗಿ ಅಮೆರಿಕದಂತಹ ರಾಷ್ಟ್ರಕ್ಕೆ ಸರಿಸಮನಾಗಿ ನಿಂತಿವೆ. ಆದರೆ ಭಾರತ ದೇಶ ತುಂಬಾ ಹಿಂದೆ ಬಿದ್ದಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಸಂತಾನ ಲಕ್ಷ್ಮೀ ಅಮ್ಮನವರ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕೊರಿಯಾದಲ್ಲಿ ಕೇವಲ 5 ಕೋಟಿ ಜನಸಂಖ್ಯೆ ಇದೆ. ಆ ದೇಶ ಕೇವಲ 20 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅಲ್ಲಿನ ವೈದ್ಯಕೀಯ ಶಿಕ್ಷಣ ಸಚಿವರ ಪತ್ನಿ ತಮ್ಮ ರಾಜಕೀಯ ಪ್ರಭಾವ ಬಳಸಿ ವೈದಕೀಯ ಸೀಟು ಪಡೆದಿದ್ದಕ್ಕೆ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಅಂತಹ ಕಾನೂನುಗಳು ನಮ್ಮ ದೇಶಕ್ಕೆ ಅಗತ್ಯವಿದೆ ಎಂದರು.

ನಮ್ಮ ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಭಾರತ ಯಾಕೆ ಹಿಂದೆ ಬಿದ್ದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ಆಗಬೇಕಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕಿದೆ. ದೇಶದ ಅಭಿವೃದ್ಧಿಗೆ ಚಿಂತನೆ ಮಾಡಬೇಕಿದೆ ಎಂದರು.

ಪ್ರತಿಯಬ್ಬರೂ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಲ್ಲುತ್ತೇವೆ. ಆದರೆ, ಯಾಕೆ ನಿಲ್ಲುತ್ತೇವೆ, ಅದರ ಭಾವನೆಗಳೇನು ಎಂಬುದನ್ನು ಯಾರಾದರೂ ಅರ್ಥ ಮಾಡಿಕೊಂಡು ಕಿಂಚಿತ್ತಾದರೂ ಯೋಚನೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನೀರಾವರಿ ಸಚಿವನಾಗಿದ್ದಾಗ ಜನತೆಗೆ ಅನ್ಯಾಯ ಆಗುವುದನ್ನು ವಿರೋಧಿಸಿ ಮೂರು ಬಾರಿ ರಾಜೀನಾಮೆ ಸಲ್ಲಿಸಿದ್ದೆ. ರಾಜ್ಯದ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ. ನಂತರ ನನ್ನನ್ನು ಕರೆದುಕೊಂಡು ಹೋಗಿ ಪ್ರಧಾನಿ ಕುರ್ಚಿಯಲ್ಲಿ ಕೂರಿಸಿದರು.

ನಾನು ಪ್ರಧಾನಿಯಾದಾಗ ಅನೇಕರು ಅಪಹಾಸ್ಯ ಮಾಡಿದರು. ದೇವೇಗೌಡರಿಗೆ ಭಾಷಣ ಮಾಡಲು ಬರುವುದಿಲ್ಲ ಎಂದು ಹಿಯ್ಯಳಿಸಿದರು. ಆದರೆ, ಒಬ್ಬ ರೈತನ ಮಗ ಪ್ರಧಾನಮಂತ್ರಿಯಾಗಿದ್ದಾಗ ದೇಶದಲ್ಲಿ ಜಾತಿ ಜಾತಿಗಳು, ಜಾತಿ ಧರ್ಮಗಳ ನಡುವೆ ಒಂದೇ ಒಂದು ಸಣ್ಣ ಘರ್ಷಣೆ ನಡೆಯಲಿಲ್ಲ ಎಂದು ಪರೋಕ್ಷವಾಗಿ ಮೋದಿ ಸರ್ಕಾರವನ್ನು ಟೀಕಿಸಿದರು.

10 ತಿಂಗಳು 20 ದಿನ ನಾನು ಪ್ರಧಾನಿಯಾಗಿದ್ದೆ. ಯಾವುದೇ ಭ್ರಷ್ಟಾಚಾರವಿಲ್ಲದಂತೆ. ಮಹಿಳೆಯರಿಗೆ ಸಮಾನತೆ ನೀಡಬೇಕೆಂಬ ದೃಷ್ಟಿಯಿಂದ ಸ್ಥಳೀಯ ಪಂಚಾಯಿತಿಗಳಿಗೆ ಮೀಸಲಾತಿ ಜಾರಿಗೆ ತಂದೆ. ಆದಿಚುಂಚನಗಿರಿ ಮಠದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ, ಬಹಳ ಕಷ್ಟಪಟ್ಟು ಕಡು ಬಡತನದಲ್ಲಿದ್ದ 1.5 ಲಕ್ಷ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಹಿರಿಯ ಸ್ವಾಮೀಜಿಗಳು ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ ಶ್ರೇಷ್ಠ ಕೆಲಸ ಮಡಿದರು. ನಿರ್ಮಲಾನಂದನಾಥ ಶ್ರೀಗಳು ಮಠವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಜಗತ್ತು ಸೃಷ್ಟಿಯಾಗುವ ಮೊದಲು ದೇವಾಲಯಗಳಿರಲಿಲ್ಲ. ಆಗ ತಾಯಿಯೇ ನಿಜವಾದ ದೈವ. ಆದರೂ ದೇವಾಲಯಗಳು ಬೇಕು ಎಂಬ ಕಾರಣದಿಂದ ನಿರ್ಮಾಣ ಮಾಡುತ್ತ ಬಂದಿದ್ದೇವೆ. ಮಾಣಿಕ್ಯನಹಳ್ಳಿಯ ಎಲ್ಲ ಜನತೆ ಒಗ್ಗೂಡಿ ದೇವಾಲಯ ನಿರ್ಮಿಸಿದ್ದೀರಿ. ಎಂದೆಂದಿಗೂ ಸಾಮರಸ್ಯದಿಂದ ಜೀವನ ನಡೆಸಿ ಎಂದು ಹಾರೈಸಿದರು.

ವೃದ್ಧೆ ಕಾಲಿಗೆ ಬಿದ್ದು ಆಶೀರ್ವಾದ
ವೇದಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು 92 ವರ್ಷದ ವೃದ್ಧೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ಗ್ರಾಮದ ಹಿರಿಯ ಮಹಿಳೆ ಕೆಂಪಮ್ಮ, ದೇವೇಗೌಡರನ್ನು ನೋಡಬೇಕು, ಅವರ ಜತೆ ಮಾತನಾಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದರಿಂದ ಕಾರ್ಯಕ್ರಮ ಆಯೋಜಕರು ಅವರನ್ನು ವೇದಿಕೆಗೆ ಕರೆತಂದರು.

ಕೆಂಪಮ್ಮ ದೇವೇಗೌಡರ ಕೈ ಹಿಡಿದುಕೊಂಡು ಮಾತನಾಡಿಸುತ್ತಿದ್ದಾಗ, ಹಿರಿಯ ಜೀವ ಕಂಡ ಗೌಡರು ಅವರ ಕಾಲಿಗೆರಗಿ ನಮಸ್ಕರಿಸಿದರು. ಮಾತ್ರವಲ್ಲ, ವೇದಿಕೆಯಲ್ಲಿ ತಮ್ಮ ಕುರ್ಚಿಯಲ್ಲಿ ಕೂರಿಸಿಕೊಂಡರು.
ನಂತರ ಆದಿಚುಂಚನಗಿರಿಯ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮ ಮುಗಿವ ತನಕ ವೃದ್ಧೆ ವೇದಿಕೆಯಲ್ಲಿ ಆಸೀನರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net