ಮರು ಬಳಕೆ ತ್ಯಾಜ್ಯ ಕೇಂದ್ರಗಳ ಸ್ಥಾಪನೆ

RE use centre
Published on

ಹಾವೇರಿ: ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಕಾರ್ಯಕ್ರಮದಡಿ ನಗರದ ಆರು ಪ್ರಮುಖ ಸ್ಥಳಗಳಲ್ಲಿ ಮರು ಬಳಕೆಯ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ಸೌಲಭ್ಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಮೇ 20ರಿಂದ ಜೂನ್ 5ರವರೆಗೆ ಈ ಕೇಂದ್ರಗಳು ಕೆಲಸ ನಿರ್ವಹಿಸಲಿವೆ.


ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ ಮಿಷನ್ 2.0 (ನಗರ) ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಪ್ರಾರಂಭಿಸಿದೆ. ನವೀಕರಿಸಿ ಮರು ಬಳಸಬಹುದಾದ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.


ಈ ಕೇಂದ್ರಗಳ ಮೂಲಕ ಕಡಿಗೊಳಿಸುವುದು (ರೆಡ್ಯೂಸ್), ಮರುಬಳಕೆ (ರಿಯೂಸ್)ಯನ್ನು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಹಾವೇರಿ ನಗರಸಭೆ ಕಾರ್ಯಗತವಾಗಿದೆ. ಇದರಲ್ಲಿ ಭಾಗವಹಿಸುವ ಎಲ್ಲ ಸಾರ್ವಜನಿಕರಿಗೆ, ಎನ್‌ಜಿ, ಎಸ್‌ಎಚ್‌ಜಿಗಳಿಗೆ ಡಿಜಿಟಲ್ ಪ್ರಮಾಣ ಪತ್ರ ಹಾಗೂ ಪ್ರೋತ್ಸಾಹ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಸ್ತುಗಳನ್ನು ಕೊಡಬಹುದು

ಈ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣ ತ್ಯಾಜ್ಯದಿಂದ ತಯಾರಿಸಲಾದ ಆಟಿಕೆ ವಸ್ತುಗಳು, ಹಳೆಯ ಬಟ್ಟೆ (ಹಳೆಯ ಜೀನ್ಸ್, ಸಮವಸ್ತ್ರ ಇತ್ಯಾದಿ), ಪತ್ರಿಕೆಗಳು, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಚೀಲಗಳು/ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ಮತ್ತು ಇಲೆಕ್ಟ್ರಾನಿಕ್ ವಸ್ತುಗಳು ಹೀಗೆ 6 ಬಗೆಯ ನವೀಕರಿಸಿ ಮರು ಬಳಸಬಹುದಾದ ವಸ್ತುಗಳನ್ನು 3ಆರ್ ಕೇಂದ್ರಗಳಿಗೆ ಸಾರ್ವಜನಿಕರು ನೀಡಬಹುದು. ತ್ಯಾಜ್ಯ ಒಪ್ಪಿಸುವ ಜನರಿಗೆ ಎರೆಹುಳು ಗೊಬ್ಬರ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಈ ಮೂಲಕ ಪರಿಸರ ರಕ್ಷಿಸಲು ನಗರಸಭೆಯೊಂದಿಗೆ ಸಹಕರಿಸಲು ಕೋರಲಾಗಿದೆ.

ಕೇಂದ್ರಗಳ ವಿವರ

ಹಾವೇರಿ ನಗರಸಭೆ ಆವರಣ, ಬಸವೇಶ್ವರ ನಗರ ಎ ಬ್ಲಾಕ್ 8ನೇ ಕ್ರಾಸ್, ನಾಗೇಂದ್ರನಮಟ್ಟಿ ಸಮುದಾಯ ಭವನ, ಜೆ.ಎಚ್.ಪಟೇಲ್ ವೃತ್ತದ ಬಳಿ ಬಾಲಭವನ, ಶಿವಶಕ್ತಿ ಪ್ಯಾಲೇಸ್ ಹತ್ತಿರ ಪಿ.ಬಿ. ರೋಡ್ ಹಾಗೂ ಬಸವೇಶ್ವರ ನಗರ ಸಿ ಬ್ಲಾಕ್ ಗಾರ್ಡ್‌ನ್ ಹತ್ತಿರ 3ಆರ್ ತ್ಯಾಜ್ಯ ಕೇಂದ್ರಗಳನ್ನು ಆರಂಭಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net