ಕೃಷಿ ಬಲವರ್ಧನೆಗೆ ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆ

IMG20251010202158.jpg
Published on

ಧಾರವಾಡ: ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯ ಚಟುವಟಿಕೆಗಳನ್ನು ಉತ್ತೇಜಿಸಲು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ನಿರಂತರವಾಗಿ ಸಂಶೋಧನಾ ಕಾರ್ಯ ಕೈಗೊಳ್ಳುತ್ತಿವೆ. ಇವುಗಳಿಗೆ ಪೂರಕವಾಗಿ ಖಾಸಗಿ ಕೃಷಿ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಕೃಷಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಿ, ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಕ್ರಮ ವಹಿಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಶ್ವವಿದ್ಯಾಲಯದ 39ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ 70ಕ್ಕೂ ಹೆಚ್ಚು ಕೃಷಿ ವಿಶ್ವವಿದ್ಯಾಲಯಗಳಿವೆ. ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳು ರಾಷ್ಟçಕ್ಕೆ ಮಾದರಿಯಾಗುವ ಸಂಶೋಧನೆಗಳನ್ನು, ಉತ್ತಮ ಬೀಜದ ತಳಿಗಳನ್ನು ಸಂಶೋಧಿಸಿ ಕೃಷಿ ವಲಯಕ್ಕೆ ನೀಡಿವೆ. ವಿಶೇಷವಾಗಿ ಧಾರವಾಡ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚು ಶ್ರಮ ವಹಿಸಿವೆ ಎಂದರು.

ದೇಶದಲ್ಲಿಯೇ ಪ್ರತಿಷ್ಠಿತ ರೈತರ ವಿಶ್ವವಿದ್ಯಾಲಯವೆಂದೇ ಪ್ರಖ್ಯಾತಿ ಹೊಂದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯವು 1986ರಲ್ಲಿ ಕರ್ನಾಟಕದಲ್ಲಿ 2ನೇ ಕೃಷಿ ವಿವಿಯಾಗಿ ಸ್ಥಾಪನೆಯಾಗಿದೆ. ಈವರೆಗೆ 39 ವರ್ಷ ಪೂರೈಸಿದ ಈ ಅವಿಸ್ಮರಣೀಯ ದಿನವನ್ನು ಸಂಸ್ಥಾಪನಾ ದಿನವಾಗಿ ಆಚರಿಸುತ್ತಿರುವುದು ವಿಶೇಷವಾಗಿದೆ. ಮೂರೂವರೆ ದಶಕಗಳ ಅವಽಯಲ್ಲಿ ಶೈಕ್ಷಣಿಕ, ಸಂಶೋಧನಾ ಹಾಗೂ ವಿಸ್ತರಣಾ ಕಾರ್ಯಗಳಲ್ಲಿ ಈ ವಿಶ್ವವಿದ್ಯಾಲಯದಿಂದ ಗಣನೀಯ ಪ್ರಮಾಣದಲ್ಲಿ ಪ್ರಗತಿ ದಾಖಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯು (ಐಸಿಎಆರ್) 2024-2029 ಅವಽಗಾಗಿ ಈ ವಿಶ್ವವಿದ್ಯಾಲಯಕ್ಕೆ `ಎ ದರ್ಜೆ'ಯೊಂದಿಗೆ ಮಾನ್ಯತೆ ಪಡೆದಿರುವುದನ್ನು ಅಭಿನಂದನೀಯ ಎಂದರು.

ಇದೇ ಪ್ರಥಮ ಬಾರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಖಾಸಗಿ ಕೃಷಿ ಮಹಾವಿದ್ಯಾಲಯ ಆರಂಭಿಸಲು ಕೆ.ಎಲ್.ಇ. ಸಂಸ್ಥೆಗೆ ಅನುಮೋದನೆ ನೀಡಿದ್ದು, ಸವದತ್ತಿ ತಾಲೂಕಿನ ತೆನಿಕೊಳ್ಳ ಗ್ರಾಮದಲ್ಲಿ ಪದವಿ ಪ್ರಾರಂಭವಾಗಲಿದೆ. ವಿಶ್ವವಿದ್ಯಾಲಯದಿಂದ ಈವರೆಗೆ ಬೆಳೆ ಸುಧಾರಣೆಯಲ್ಲಿ ಒಟ್ಟು 267 ವಿವಿಧ ಬೆಳೆಗಳ ತಳಿಗಳು, 241 ಉತ್ಪಾದನಾ ತಂತ್ರಜ್ಞಾನಗಳು ಹಾಗೂ ಬೆಳೆ ಸಂರಕ್ಷಣೆ ವಿಭಾಗದಲ್ಲಿ ಒಟ್ಟು 331 ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ಒಟ್ಟಾರೆ 1,139 ತಂತ್ರಜ್ಞಾನಗಳು ಅಭಿವೃದ್ಧಿಗೊಂಡಿವೆ ಎಂದರು.

ಸಾವಯವ ಕೃಷಿ ಪ್ರೋತ್ಸಾಹಿಸಲು ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ 2006ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲು ಸಾವಯವ ಕೃಷಿ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆಯು ತಯಾರಿಸುವ ಜೈವಿಕ ಗೊಬ್ಬರಗಳು ಹಾಗೂ ಜೈವಿಕ ರೋಗ, ಕೀಟನಾಶಕಗಳಿಗೆ ರೈತರಿಂದ ಭಾರಿ ಬೇಡಿಕೆಯಿದ್ದು, ಸಾವಿರಾರು ರೈತರು ಅವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಆಕ್ಸಿಯೋಮ್-4 ಮಿಷನ್ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಕೃಷಿ ವಿಶ್ವವಿದ್ಯಾಲಯವು ಸಂಶೋಧನಾ ಪ್ರಯೋಗಕ್ಕಾಗಿ ಕಳುಹಿಸಿದ ಹೆಸರು ಮತ್ತು ಮೆಂತೆ ಕಾಳುಗಳ ಮೊಳಕೆ ಪರೀಕ್ಷೆ ಯಶಸ್ವಿಯಾಗಿದ್ದು, ಸಂಶೋಧನೆ ಮುಂದುವರಿದಿದೆ. ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಭಾರತ ಸರ್ಕಾರವು ದೇಶದ 14 ಕೇಂದ್ರಗಳ ಪೈಕಿ ಈ ವಿಶ್ವವಿದ್ಯಾಲಯವನ್ನು ನೈಸರ್ಗಿಕ ಕೃಷಿ ತರಬೇತಿ ಕೇಂದ್ರವನ್ನಾಗಿ ಆಯ್ಕೆ ಮಾಡಿದ್ದು, ಗೋವಾ ಹಾಗೂ ಕರ್ನಾಟಕ ರಾಜ್ಯಗಳ ವಿವಿಧ ಅಧಿಕಾರಿಗಳಿಗೆ ನೈಸರ್ಗಿಕ ಕೃಷಿ ಕುರಿತು ಹಲವಾರು ತರಬೇತಿ ನೀಡಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಮಾತನಾಡಿದರು. ಶಾಸಕರಾದ ರವಿ ಗಣಿಗ, ಮಧು ಮಾದೇಗೌಡ, ಕೃಷಿ ವಿವಿ ಆಡಳಿತ ಮಂಡಳಿಯ ಸದಸ್ಯರಾದ ಪಾರ್ವತಿ ಕುರಲೇ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸ್ ಪಾಟೀಲ, ರವಿಕುಮಾರ ಮಾಳಿಗೇರ, ಮಾಲತೇಶ ಶ್ಯಾಗೋಟಿ, ಕುಲಸಚಿವೆ ಜಯಶ್ರೀ ಶಿಂತ್ರಿ ವೇದಿಕೆಯಲ್ಲಿದ್ದರು. ಸಂಶೋಧನೆ ಮತ್ತು ವಿಸ್ತರಣೆ ವಿಜ್ಞಾನಿಗಳಿಗೆ ಯುವ ವಿಜ್ಞಾನಿ ಪ್ರಶಸ್ತಿ ಹಾಗೂ ಇತರೆ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಡಾ.ಬಿ.ಡಿ.ಬಿರಾದರ ಸ್ವಾಗತಿಸಿದರು. ಡಾ.ಎಂ.ಬಿ.ಮಂಜುನಾಥ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net