ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಾರ್ಹ

PIGMI NANAIHA
Published on

ಮಡಿಕೇರಿ: ಕುಂಬಾರ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಂಬಾರ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕುಂಬಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಮಡಿಕೆ ತಯಾರಕರ ಸಹಕಾರ ಸಂಘದ ಅಧ್ಯಕ್ಷ ಎಂ.ಡಿ.ನಾಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಳೆದ ಕೆಲವು ವರ್ಷಗಳಿಂದ ಕುಂಬಾರ ಅಭಿವೃದ್ಧಿ ನಿಗಮಕ್ಕಾಗಿ ಕುಂಬಾರ ಸಮುದಾಯದ ಮುಖಂಡರು ಹೋರಾಟವನ್ನು ತೀವ್ರಗೊಳಿಸಿದ್ದರು. ಇದಕ್ಕೆ ಮಣಿದ ರಾಜ್ಯ ಸರ್ಕಾರ ನಿಗಮ ಸ್ಥಾಪಿಸುವ ಮೂಲಕ ಕುಂಬಾರರ ಅಭ್ಯುದಯಕ್ಕೆ ಸಹಕಾರ ನೀಡಿದೆ. ಜಿಲ್ಲೆಯಲ್ಲಿರುವ ಸಮುದಾಯದ ಪರವಾಗಿ ಹೋರಾಟಗಾರರು ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.


ನಿಗಮವು ಕುಂಬಾರ, ಚಕ್ರಸಾಲಿ, ಕುಲಾಲ ಸೇರಿದಂತೆ ಇನ್ನಿತರ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಲಿದೆ. ರಾಜ್ಯದಲ್ಲಿ ಕುಂಬಾರ ಸಮುದಾಯ ಸುಮಾರು ೨೮ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದ ಹಾಗೂ ಶೋಷಿತ ಸಮುದಾಯವಾಗಿದೆ.


ಕುಂಬಾರ ವೃತ್ತಿಯನ್ನೇ ನಂಬಿಕೊಂಡಿರುವ ಈ ಸಮುದಾಯದ ಮಂದಿ ಹೊಟ್ಟೆಪಾಡಿಗಾಗಿ ಊರು ಊರು ಸಂಚರಿಸುತ್ತಾರೆ. ಇದರಿಂದ ಇವರ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಇದೀಗ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಸಮಸ್ಯೆಗಳು ಪರಿಹಾರವಾಗಿ ಎಲ್ಲಾ ರೀತಿಯಲ್ಲಿ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗಲಿದೆ ಎಂದು ನಾಣಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net