ರಾಜ್ಯದಲ್ಲಿ ಮತ್ತಷ್ಟು ಹೊಸ ವಿವಿಗಳ ಸ್ಥಾಪನೆ: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್. ಅಶ್ವತ್ಥ ನಾರಾಯಣ ಹೇಳಿದರು.

ashwath narayana
Published on

ಮೈಸೂರು: ರಾಜ್ಯದಲ್ಲಿ ಮತ್ತಷ್ಟು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್. ಅಶ್ವತ್ಥ ನಾರಾಯಣ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ‘ಉನ್ನತ ಶಿಕ್ಷಣದಲ್ಲಿ ಸುಶಾಸನ : ಪರಿಕಲ್ಪನೆ ಮತ್ತು ಅನುಷ್ಠಾನ’ ವಿಷಯದ ಕುರಿತು ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 15 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದ್ದು, ಹೊಸದಾಗಿ ಜಿಲ್ಲಾವಾರು 9 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು.

ವಿಶ್ವ ವಿದ್ಯಾಲಯಗಳಲ್ಲಿ ಆಡಳಿತ ಹಾಗೂ ಶೈಕ್ಷಣಿಕ ಸುಧಾರಣೆಗೆ ವಿಕೇಂದ್ರೀಕರಣ ವ್ಯವಸ್ಥೆಗೆ ಆದ್ಯತೆ ನೀಡಿ ಸ್ವಾಯತ್ತತೆಗೆ ಒತ್ತು ನೀಡ ಲಾಗಿದೆ. ಸರ್ಕಾರ ಯಾವುದೇ ಹೊಸ ವ್ಯವಸ್ಥೆ ತಂದರೂ ಅದು ಅನುಷ್ಠಾನವಾಗದೆ ಇದ್ದರೆ ವ್ಯರ್ಥವಾಗುತ್ತದೆ. ಹಾಗಾಗಿ ಹೊಸ ಸುಧಾರಣಾ ವ್ಯವಸ್ಥೆಗಳು ವಿಶ್ವ ವಿದ್ಯಾಲಯಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಶೇ.10 ರಷ್ಟು ವಿದ್ಯಾರ್ಥಿಗಳಿಗೆ ನೀವು ಏನು ಹೇಳಿಕೊಡದೆ ಇದ್ದರೂ ಅವರು ಸಾಧನೆ ತೋರುತ್ತಾರೆ. ಏಕೆಂದರೆ ಅವರಲ್ಲಿ ಅಂತಹ ಪ್ರತಿಭೆ ಇರುತ್ತದೆ. ಹಾಗಾಗಿ ಪ್ರಾಧ್ಯಾಪಕರು ತಮ್ಮ ಜವಾಬ್ದಾರಿ ಅರಿತು ವಿದ್ಯಾರ್ಥಿಗಳನ್ನು ಸರಿಯಾದ ದಿಕ್ಕಿನ ಕಡೆಗೆ ಕರೆದೊಯ್ಯಬೇಕು. ಇಲ್ಲವಾದಲ್ಲಿ ಯುವಜನರು ಮುಂದೆ ಹತಾಶರಾಗಿ, ಅಸಹಾಯಕರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ವಿಶ್ವವಿದ್ಯಾನಿಲಯಗಳಲ್ಲಿ ಅಕಾಡೆಮಿಕ್ ಡಾಕ್ಯುಮೆಂಟ್‌ಗಳು ಹಾಗೂ ಆಡಳಿತವನ್ನು ಡಿಜಿಟಲೀಕರಣ ಮಾಡಲಾಗಿದೆ. ಇದರಿಂದ ಅಂಕಪಟ್ಟಿ ಹಗರಣಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಿದೆ. ಈ ಹಿಂದೆ ಅಂಕಪಟ್ಟಿ ಪರಿಶೀಲನೆಗೆ ಸಾಕಷ್ಟು ಸಮಯ ತೆಗೆದುಕೊಳ್ಳ ಲಾಗುತಿತ್ತು, ಇದೀಗ ಕ್ಷಣಮಾತ್ರದಲ್ಲಿ ಪರಿಶೀಲಿಸಬಹುದು. ಉನ್ನತ ಶಿಕ್ಷಣದಲ್ಲಿ ಸಂಪೂರ್ಣ ಡಿಜಿಟಲೀಕರಣ ಮಾಡಿರುವ ಪ್ರಥಮ ರಾಜ್ಯ ನಮ್ಮದಾಗಿದೆ ಎಂದರು.
ವೇದಿಕೆಯಲ್ಲಿ ಸುತ್ತೂರು ಶ್ರೀ, ಶಾಸಕ ಎಲ್. ನಾಗೇಂದ್ರ, ಚಾಣಕ್ಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಯಶವಂತ ಡೋಂಗ್ರೆ, ಮೈಸೂರು ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಎಚ್. ರಾಜಶೇಖರ್, ವಿಶ್ರಾಂತ ಕುಲಪತಿ ಪ್ರೊ. ಎಸ್.ಎನ್. ಹೆಗ್ಡೆ, ಕುಲಸಚಿವೆ ವಿ.ಆರ್. ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ. ಜ್ಞಾನಪ್ರಕಾಶ್, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿ ಡಾ. ಶರಣಪ್ಪ ಹಲಸೆ ಹಾಗೂ ಇತರರು ಇದ್ದರು.

ಪ್ರಭಾರ ಕುಲಪತಿ ಪ್ರೊ.ಎಚ್. ರಾಜಶೇಖರ್ ಹೇಳಿದರು. ಉತ್ತಮ ಪ್ರಾಂಶುಪಾಲರು, ಉತ್ತಮ ಪ್ಲೇಸ್‌ಮೆಂಟ್ ಆಫೀಸರ್, ಎನ್‌ಇಪಿ ಪ್ರಶಸ್ತಿ, ಉನ್ನತ ಶಿಕ್ಷಣದಲ್ಲಿ ಉತ್ತಮ ಕಾರ್ಯಚಟುವಟಿಕೆ, ಉತ್ತಮ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net