ಇಂಡಿಗನತ್ತದಲ್ಲಿ ಆರೋಗ್ಯ ಕೇಂದ್ರ, ಅಂಗನವಾಡಿ ಸ್ಥಾಪನೆ

02 HANUR 2
ಇಂಡಿಗನತ್ತ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರ, ಅಂಗನವಾಡಿ ಹಾಗೂ ಮೊಬೈಲ್ ಟವರ್ ಸ್ಥಾಪನೆಗೆ ನಿವೇಶನದ ಹಕ್ಕು ಪತ್ರವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಹಸ್ತಾಂತರಿಸಿದರು. ಶರತ್‌ಕುಮಾರ್, ಶಿವಕುಮಾರ್, ವಿನೋದ್, ಸಿಂಗಾರಶೆಟ್ಟಿ ಇತರರು ಇದ್ದರು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ, ಅಂಗನವಾಡಿ ಹಾಗೂ ಮೊಬೈಲ್ ಟವರ್ ಸ್ಥಾಪನೆಗೆ ಸೋಮವಾರ ಕಂದಾಯ ಇಲಾಖೆಯ ಅಧಿಕಾರಿಗಳು ಅಗತ್ಯ ನಿವೇಶನದ ಮಂಜೂರಾತಿ ಪ್ರತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಗ್ರಾಮವು ಮ.ಬೆಟ್ಟದಿಂದ ಸುಮಾರು 8 ಕಿ.ಮೀ. ಅಂತರವನ್ನು ಹೊಂದಿದ್ದು, ಅರಣ್ಯ ಪ್ರದೇಶದಿಂದ ಕೂಡಿದೆ. ಇಲ್ಲಿನ ಹಲವು ದಶಕದಿಂದಲೂ ಜನರು ವಾಸಿಸುತ್ತಿದ್ದಾರೆ. ಆದರೆ ಸಮರ್ಪಕ ರಸ್ತೆ, ವಿದ್ಯುತ್, ಆಸ್ಪತ್ರೆ ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಕರ್ಯವಿಲ್ಲ. ಇದರಿಂದ ಜನರು ತೊಂದರೆ ಪಡುತ್ತಿದ್ದಾರೆ. ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಕಳೆದ ಲೋಕಸಭೆ ಚುನಾವಣೆ ವೇಳೆ ಮತದಾನವನ್ನು ಬಹಿಷ್ಕರಿಸಿ ಮತಗಟ್ಟೆಯನ್ನು ಧ್ವಂಸಗೊಳಿಸಿದ್ದರು. ಈ ವೇಳೆ ಮತ ಚಲಾಯಿಸಲು ಆಗಮಿಸಿದ್ದ ಮೆಂದಾರೆ ಗ್ರಾಮಸ್ಥರು, ತಹಸೀಲ್ದಾರ್ ಹಾಗೂ ಇನ್ನಿತರ ಅಧಿಕಾರಿಗಳು ಕಲ್ಲೇಟಿನಿಂದ ಗಾಯಗೊಂಡಿದ್ದರು.

ಬಳಿಕ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ವಿದ್ಯುತ್ ಹಾಗೂ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಆದರೆ ಅಂಗನವಾಡಿ, ಆಸ್ಪತ್ರೆ ಹಾಗೂ ಮೊಬೈಲ್ ಟವರ್ ಸ್ಥಾಪನೆಗೆ ಸ್ಥಳಾವಕಾಶ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಸರ್ಕಾರಿ ಜಾಗವನ್ನು ಗುರ್ತಿಸಿ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಗ್ರಾಮದ ಸರ್ವೇ ನಂಬರ್ 10ರಲ್ಲಿ ಸಮೀಕ್ಷೆ ನಡೆಸಿದ ಅಧಿಕಾರಿಗಳ ತಂಡ 6 ಎಕರೆ ಜಾಗವನ್ನು ಗುರುತಿಸಿ ಡಿಸಿ ಅವರಿಗೆ ವರದಿ ಸಲ್ಲಿಸಿತ್ತು. ಸರ್ಕಾರಿ ಜಾಗ 6 ಎಕರೆಯಲ್ಲಿ 10 ಸೆಂಟ್ ಆರೋಗ್ಯ ಉಪ ಕೇಂದ್ರಕ್ಕೆ, 6 ಸೆಂಟ್ ಆರೋಗ್ಯ ಉಪಕೇಂದ್ರ ಹಾಗೂ 5 ಸೆಂಟ್ ಜಾಗದಲ್ಲಿ ಮೊಬೈಲ್ ಟವರ್ ಸ್ಥಾಪಿಸುವ ಸಂಬಂಧ ನಿವೇಶನದ ಮಂಜೂರಾತಿ ಪ್ರತಿಯನ್ನು ಗ್ರಾಪಂ ಪಿಡಿಒಗೆ ಹಾಗೂ ಮೊಬೈಲ್ ಟವರ್ ಸ್ಥಾಪಿಸುವ ಸಂಬಂಧ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದ್ದು, ಗ್ರಾಮಸ್ಥರು ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.

ಬಿಎಸ್‌ಎನ್‌ಎಲ್ ಮೈಸೂರು ವಿಭಾಗದ ಸಹಾಯಕ ವ್ಯವಸ್ಥಾಪಕ ಶರತ್ ಕುಮಾರ್, ಆರ್‌ಐ ಶಿವಕುಮಾರ್, ತಾಲೂಕು ಭೂ ಮಾಪನ ಅಧಿಕಾರಿ ಸಿಂಗಾರಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ವಿನೋದ್, ಪಿಡಿಒ ಕಿರಣ್‌ಕುಮಾರ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net