

ಮೈಸೂರು: ಮೈಸೂರಿನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ ಮಾಡಲು ಚಿಂತಿಸಲಾಗಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ತಿಳಿಸಿದರು.
ಭಾರತೀಯ ಕೈಗಾರಿಕೆಗಳ ಒಕ್ಕೂಟ, ಎಂಎಸ್‌ಎಂಇ, ಸಿಐಐ ಕರ್ನಾಟಕ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಇಂಟಿಗ್ರೇಟ್-24’ ಖರೀದಿದಾರರು, ಮಾರಾಟಗಾರರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಟಿ-ಬಿಟಿ ಜತೆಗೆ ಎಲೆಕ್ಟ್ರಾನಿಕ್ ಕ್ಷೇತ್ರ ಈಗ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಪ್ರತಿಯೊಂದು ಕ್ಷೇತ್ರಕ್ಕೂ ಇಂದು ಪೂರಕ ವಾತಾವರಣವಿದೆ. ಆದ್ದರಿಂದ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಸ್ಥಾಪನೆಗೆ ಆಲೋಚಿಸಲಾಗುತ್ತಿದೆ ಎಂದರು.
ದೇಶದ ಜಿಡಿಪಿಯಲ್ಲಿ ಸಣ್ಣ ಕೈಗಾರಿಕೆ ಕೊಡುಗೆ 5ನೇ ಸ್ಥಾನದಲ್ಲಿ ಇದೆ. ಇದು 3ನೇ ಸ್ಥಾನಕ್ಕೆ ಏರಬೇಕು. ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳು ಕಾರ್ಯನಿರ್ವಹಿಸಬೇಕಿದೆ ಎಂದರು.
ತೆರಿಗೆ ಕಡಿಮೆ ಮಾಡಬೇಕು ಎಂಬುದು ಕೈಗಾರಿಕೋದ್ಯಮಿಗಳ ಬೇಡಿಕೆಯಾಗಿದ್ದು, ಈ ಕುರಿತು ಸರ್ಕಾರದ ಹಂತದಲ್ಲಿ ಪರಿಹರಿಸಲು ಯತ್ನಿಸಲಾಗುತ್ತಿದೆ. ಸಬ್ಸಿಡಿ ಮೊತ್ತವನ್ನು ಸಕಾಲದಲ್ಲಿ ಬಿಡುಗಡೆಗೂ ಕ್ರಮವಹಿಸಲಾಗುವುದು. ಅತಿ ಸಣ್ಣ ಕೈಗಾರಿಕೆಯಿಂದ ಬೃಹತ್ ಕೈಗಾರಿಕೆಯಾಗಿ ಪರಿವರ್ತನೆಯಾಗುವ ಹಂತಕ್ಕೆ ಕೈಗಾರಿಕೆಗಳನ್ನು ಉತ್ತೇಜನ ನೀಡಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಸಿಐಐ ಸಂಚಾಲಕ ಸ್ಯಾಮ್ ಚೆರಿಯನ್ ಮಾತನಾಡಿ, ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ(ಜಿಡಿಪಿ) ಶೇ.29ರಷ್ಟು ಎಂಎಸ್‌ಎಂಇನಿಂದ ಪಾಲು ಇದೆ. ಮುಂದಿನ ದಿನಗಳಲ್ಲಿ ಇದು ಶೇ.40ಕ್ಕೆ ತಲುಪಬೇಕಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಯಿಂದ ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಣ್ಣ ಕೈಗಾರಿಕೆಗಳ ಉತ್ಪಾದನೆಗಳು ವಿದೇಶಕ್ಕೆ ರಫ್ತಾಗುತ್ತಿದೆ. ಬೇರೆ ದೇಶಗಳಿಗೂ ಪೈಪೋಟಿ ನೀಡುತ್ತಿವೆ ಎಂದರು.
ಎನ್.ರಂಗರಾವ್ ಆ್ಯಂಡ್ ಸನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, ಮೈಸೂರಿನಲ್ಲಿ ಸಣ್ಣ ಕೈಗಾರಿಕೆಗಳು ಪ್ರಗತಿ ಹೊಂದುತ್ತಿವೆ. ಸಾಕಷ್ಟು ಬಂಡವಾಳ ಹೂಡಿಕೆ ಮಾಡಲು ಮುಂದಾಗಿರುವುದರಿಂದ ಅಭಿವೃದ್ಧಿ ಕಾಣಬಹುದು. ಗುಣಮಟ್ಟದ ವಸ್ತುಗಳನ್ನು ಉತ್ಪಾದನೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಇದರಿಂದ ಬೇಡಿಕೆ ವೃದ್ಧಿಯಾಗಲಿದೆ. ನಮ್ಮ ಕಂಪನಿಯ ಉತ್ಪನ್ನಗಳು ಮೈಸೂರಿನ ಅಗ್ರಹಾರದಿಂದ ಚೀನಾತನಕವೂ ತಲುಪಿವೆ ಎಂದರು.
ಸಿಐಐ ಕರ್ನಾಟಕ ಘಟಕದ ಅಧ್ಯಕ್ಷ ಎನ್. ವೇಣು ಮಾತನಾಡಿ, ಬೆಂಗಳೂರಿನ ಆಚೆಯೂ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು. ಬೆಳಗಾವಿ, ಹುಬ್ಬಳ್ಳಿ, ಮೈಸೂರು ನಗರಗಳಲ್ಲಿ ಉದ್ಯಮಗಳು ಸ್ಥಾಪನೆಯಾಗಬೇಕು. ಕೋವಿಡ್ ದೂರವಾದ ಬಳಿಕ ಸಣ್ಣ ಕೈಗಾರಿಕಾ ಕ್ಷೇತ್ರ ಮತ್ತಷ್ಟು ಸುಧಾರಣೆಯೊಂದಿಗೆ ಮುನ್ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಬೇಕಾಗಿದೆ ಎಂದರು.
ಎಂಎಸ್‌ಎಂಇ ಕೋ-ಚೇರ‌್ಮನ್ ಎಂ.ಪೊನ್ನುಸ್ವಾಮಿ ಮಾತನಾಡಿ, ಎಲೆಕ್ಟ್ರಾನಿಕ್, ಟೆಲಿಕಾಮ್, ಕಾಮರ್ಸ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರವು ಬೆಸೆದುಕೊಂಡಿದೆ. ಹೀಗಾಗಿ, ಸಣ್ಣ, ಮಧ್ಯಮ ಕೈಗಾರಿಕೆ ಬೆಳವಣಿಗೆಯು ಇತರ ಕ್ಷೇತ್ರಗಳ ಪ್ರಗತಿಗೂ ಕಾರಣವಾಗಲಿದೆ ಎಂದರು.
ಸಿಐಐ ಮೈಸೂರು ವಲಯದ ಅಧ್ಯಕ್ಷ ಈಶ್ವರ್ ರಾವ್, ನಿರ್ದೇಶಕಿ ರಾಧಿಕಾ ಹಾಜರಿದ್ದರು. ಬಳಿಕ ಖರೀದಿರಾರರು-ಮಾರಾಟಗಾರರ ನಡುವೆ ಚರ್ಚೆ, ಸಂವಾದ ನಡೆಯಿತು.