ಕೃಷಿ ಇಂಜಿನಿಯರಿಂಗ್ ನಿರ್ದೇಶನಾಲಯ ಸ್ಥಾಪನೆ

06-11-Shiva-2
ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ ಭಾರತೀಯ ಕೃಷಿ ಇಂಜಿನಿಯರ್ಸ್‌ ಸಂಸ್ಥೆ ವಾರ್ಷಿಕ ಸಮಾವೇಶ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯನಾಯಕ, ಐಎಸ್‌ಎಇ ಅಧ್ಯಕ್ಷ ಡಾ.ಎನ್.ಎಸ್.ಜಹಾ, ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಸಾಹೂ, ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಇದ್ದರು.
Published on

ರಾಯಚೂರು: ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಇಂಜಿನಿಯರಿಂಗ್ ನಿರ್ದೇಶನಾಲಯ ಸ್ಥಾಪನೆ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ ಭಾರತೀಯ ಕೃಷಿ ಇಂಜಿನಿಯರ್ಸ್‌ ಸಂಸ್ಥೆ ವಾರ್ಷಿಕ ಸಮಾವೇಶ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಈ ಕುರಿತಂತೆ ವರದಿ ತರಿಸಿಕೊಂಡು ಆರ್ಥಿಕ ಇಲಾಖೆ ಅನುಮೋದನೆ ಪಡೆದು ನಿರ್ದೇಶನಾಲಯ ಸ್ಥಾಪಿಸಲಾಗುವುದು ಎಂದರು.
ಕಳೆದ 10-15 ವರ್ಷಗಳಿಂದ ಪ್ರಕೃತಿಯಲ್ಲಿ ವ್ಯತ್ಯಾಸಗಳುಂಟಾಗಿ ಮಣ್ಣನ ಲವತ್ತತೆ ಕುಸಿಯುತ್ತಿದ್ದು, ಇಳುವರಿಯಲ್ಲಿ ಇಳಿಕೆ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ರೈತರಿಗೆ ಕೇವಲ ಪ್ರೋತ್ಸಾಹಧನ ನೀಡಿದರೆ ಸಾಲದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕೃಷಿ ಲಾಭದಾಯಕವಾಗುವಂತೆ ಮಾಡಬೇಕಾಗಿದೆ.
ಕೃಷಿ ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕೆ ಅಂಟಿಕೊಳ್ಳದೆ ಉದ್ಯೋಗ ಸೃಷ್ಟಿಸುವಂತಹ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಕಡಿಮೆ ನೀರು ಬಳಸಿ ಆಹಾರ ಉತ್ಪಾದನೆ ತಂತ್ರಜ್ಞಾನ, ಕಡಿಮೆ ಅವಯಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸವಾಗಬೇಕಾಗಿದೆ.
ರಾಜ್ಯದಲ್ಲಿನ ನಾಲ್ಕು ಕೃಷಿ ವಿವಿಗಳು ರೈತರಿಗೆ ಪೂರಕವಾಗಿ ಕೆಲಸ ಮಾಡಬೇಕು. ಸರ್ಕಾರ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದೆ. ಸಂಶೋಧನೆಗೆ 6 ಕೋಟಿ ರೂ., ಸ್ಟಾರ್ಟ್‌ಪ್‌ಗೆ 10 ಕೋಟಿ ರೂ. ಕೃಷಿ ಹೊಂಡ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶ ನೀರಾವರಿಗೆ ಒಳಪಟ್ಟಿದ್ದರೂ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಾಂತ್ರಿಕ ನೆರವಿನ ಅವಶ್ಯತೆಯಿದ್ದು, ಭತ್ತ ನಾಟಿಯಂತ್ರ ಇನ್ನೂ ಪರಿಣಾಮಕಾರಿಯಾಗಿ ನೆರವಾಗುತ್ತಿಲ್ಲ. ಪ್ರತಿವರ್ಷ ನೂರಾರು ಕೃಷಿ ಪದವೀಧರರು ಹೊರಬರುತ್ತಿದ್ದು, ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಭಾರತೀಯ ಕೃಷಿ ಇಂಜಿನಿಯರ್ಸ್‌ ಸಂಸ್ಥೆ ಅಧ್ಯಕ್ಷ ಡಾ.ಎನ್.ಎಸ್.ಜಹಾ ಮಾತನಾಡಿ, ಕೃಷಿ ವಲಯದಲ್ಲಿ ತಾಂತ್ರಿಕತೆ ಬಳಕೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿದೆ. ರೈತರಿಗೆ ಕೃಷಿಗೆ ಅನುಕೂಲವಾದ ತಾಂತ್ರಿಕತೆ ಅಭಿವೃದ್ಧಿ ಪಡಿಸಲು ಕೃಷಿ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳು ಮುಂದಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಹಂಪಯ್ಯ ನಾಯಕ, ಐಎಸ್‌ಎಇ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಸಾಹೂ, ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ವಿವಿ ಆಡಳಿತ ಮಂಡಳಿ ಸದಸ್ಯ ಡಿ.ಮಲ್ಲಿಕಾರ್ಜುನ, ಕೃಷಿ ಇಂಜಿನಿಯರಿಂಗ್ ವಿಭಾಗದ ಡೀನ್ ಡಾ.ನೇಮಿಚಂದ್ರಪ್ಪ, ಡಾ.ಉದಯಕುಮಾರ ನಿಡೋಣಿ, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net