ಅತಿವೃಷ್ಠಿ ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪನೆ

20 nrp 1. (1)
ಎನ್.ಆರ್.ಪುರದಲ್ಲಿ ಎಸಿ ಕಾಂತರಾಜ್ ಅಧ್ಯಕ್ಷತೆಯಲ್ಲಿ ಅತಿವೃಷ್ಠಿಯಿಂದ ಸಂಭವಿಸಬಹುದಾದ ಸಮಸ್ಯೆಗಳ ಬಗ್ಗೆ ಸಭೆ ನಡೆಯಿತು. ಇಒ ನವೀನ್‌ಕುಮಾರ್, ರಮೇಶ್ ಇದ್ದರು.
Published on

ಎನ್.ಆರ್.ಪುರ: ಮಲೆನಾಡು ಭಾಗದಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ, ಅತಿವೃಷ್ಠಿ ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಕಚೇರಿ, ತಾಪಂ, ಮೆಸ್ಕಾಂ, ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕದಳ ಕಚೇರಿಗಳಲ್ಲಿ 247 ಕಂಟ್ರೋಲ್ ರೂಂ ಸ್ಥಾಪಿಸಬೇಕು ಎಂದು ತರೀಕೆರೆ ಉಪ ವಿಭಾಗಾಕಾರಿ ಕಾಂತರಾಜ್ ಹೇಳಿದರು. ತಾಪಂ ಸಾಮರ್ಥ್ಯ ಸೌಧದಲ್ಲಿ ಅತಿ ವೃಷ್ಠಿಯಿಂದ ಸಂಭವಿಸಬಹುದಾದ ಸಮಸ್ಯೆಗಳ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿ, ಇಲಾಖೆಗಳು ತೆರೆಯುವ ಕಂಟ್ರೋಲ್ ರೂಂ ನಲ್ಲಿ 247 ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಚಾಲ್ತಿಯಲ್ಲಿರುವ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು. ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇರಬೇಕು ಎಂದು ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದದರು.
ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅತಿವೃಷ್ಟಿಯಿಂದ ಹಾನಿಗೊಳಗಾಗಬಹುದಾದ ಗ್ರಾಮಗಳ ಪಟ್ಟಿ ಮಾಡಬೇಕು. ಹಳೆ ಸೇತುವೆ, ದುರಸ್ತಿಗೆ ಬಂದಿರುವ ಸೇತುವೆಗಳು, ಕಳೆದ ಬಾರಿ ಅತಿವೃಷ್ಠಿಯಿಂದ ಹಾನಿಯಾದ ಸೇತುವೆ ಹಾಗೂ ರಸ್ತೆ ಬದಿ ಮಣ್ಣು ಕುಸಿಯ ಬಹುದಾದ ರಸ್ತೆಗಳ ಮಾಹಿತಿ ಪಟ್ಟಿ ಮಾಡಬೇಕು. ಅರಣ್ಯ ಇಲಾಖೆ ರಸ್ತೆ ಬದಿ ಇರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು. ಅರಣ್ಯ, ಲೋಕೋಪಯೋಗಿ ಹಾಗೂ ಮೆಸ್ಕಾಂ ಇಲಾಖೆ ಮರ ಬಿದ್ದ ಕೂಡಲೇ ಸಮನ್ವಯ ಸಾಧಿಸಿಕೊಂಡು ಕೂಡಲೇ ಮರ ತೆರವಿಗೆ ಕ್ರಮವಹಿಸ ಬೇಕು. ತುರ್ತು ಸಂದರ್ಭದಲ್ಲಿ ಯಾವುದೇ ಆದೇಶಗಳಿಗೆ ಕಾಯದೆ, ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅತಿವೃಷ್ಠಿಯಿಂದ ಹಾನಿ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಮನೆಗಳ ಹಾನಿ ಸಂಭವಿಸಿದರೆ ಕೂಡಲೇ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಗ್ರಾಪಂ ಪಿಡಿಒ ಗಮನಕ್ಕೆ ತಂದು ಮನೆ ಹಾನಿಯಾಗಿರುವ ಭಾವಚಿತ್ರ ತೆಗೆದು, ಕಡತ ತಯಾರಿಸಬೇಕು. ಭಾವಚಿತ್ರದಲ್ಲಿ ಆ ವೃತ್ತಕ್ಕೆ ಸಂಬಂಧಪಟ್ಟ ಗ್ರಾಮಲೆಕ್ಕಿಗರು ಕಡ್ಡಾಯವಾಗಿ ಇರಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಈಗ ಎಸ್‌ಡಿಆರ್‌ಎ್ ನಡಿ ಅನುದಾನ ನೀಡಲಾಗುವುದು. ಮುಂದೆ ಅತಿವೃಷ್ಠಿ ಪೀಡಿತ ತಾಲೂಕು ಎಂದು ಘೋಷಣೆಯಾದಲ್ಲಿ ಎನ್‌ಡಿಆರ್‌ಎ್ ನಡಿ ಅನುದಾನದಲ್ಲಿ ಪರಿಹಾರ ನೀಡಲಾಗುವುದು. ಗ್ರಾಮಲೆಕ್ಕಿಗರು ಮನೆಗಳ ಹಾನಿ ಸಂಭವಿಸಿದಲ್ಲಿ ಸರಿಯಾಗಿ ಅಸಸ್‌ಮೆಂಟ್ ಹಾಗೂ ಇತರೆ ದಾಖಲಾತಿ ಪರಿಶೀಲಿಸಿ, ಕಡತ ತಯಾರಿಸಿ ಸಲ್ಲಿಸಬೇಕು ಎಂದು ಎಲ್ಲಾ ಗ್ರಾಮ ಲೆಕ್ಕಿಗರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ತಹಸೀಲ್ದಾರ್ ರಮೇಶ್, ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net