

ಶನಿವಾರಸಂತೆ: ಶತಮಾನ ದಾಟಿದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರೃ ದಿನವನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಬೈಕ್ ಬುಡ್ಡಿಸ್ ಸಮಾಜ ಸೇವಾ ಸಂಸ್ಥೆ ವತಿಯಿಂದ ಆಚರಿಸಲಾಯಿತು.
78ನೇ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಸದರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಬೈಕ್ ಬುಡ್ಡಿಸ್ ಸಂಸ್ಥೆ ಸೇರಿ ಶಾಲೆಯ ಆಟದ ಮೈದಾನದ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಗೇಟ್ ಉದ್ಘಾಟಿಸಿ ಗೇಟ್ ಕೀಯನ್ನು ಶಾಲಾ ಸಪರ್ದಿಗೆ ಒಪ್ಪಿಸಲಾಯಿತು.
ಬೈಕ್ ಬುಡ್ಡಿಸ್ ಸಂಸ್ಥೆಯ ಸ್ಥಾಪಕ ಸತೀಶ್ ಮಾತನಾಡಿ, ನಾವು ವಿದ್ಯಾಭ್ಯಾಸ ಮಾಡಿದ ಶಾಲೆಗಳಿಗೆ ಮತ್ತು ಸರ್ಕಾರಿ ಶಾಲೆಗಳ ಉಳಿವಿಗಾಗಿ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ಹತ್ತು ವರ್ಷದ ಹಿಂದೆ ಬೈಕ್ ಬುಡ್ಡಿಸ್ ಸಮಾಜ ಸೇವಾ ಸಂಸ್ಥೆಯನ್ನು ಸ್ಥಾಪಿಸಲಾಯಿತು ಎಂದರು.
ನಮ್ಮ ಸಂಸ್ಥೆಯಲ್ಲಿ ಈಗ ವಿವಿಧ ಕಡೆಗಳಿಂದ ನೂರಾರು ಸದಸ್ಯರಿದ್ದು ಈ ಮೂಲಕ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಕೊಡುಗೆಯನ್ನು ನೀಡುತ್ತ ಬರುತ್ತಿದ್ದು ಪ್ರತಿವರ್ಷ ಸ್ವಾತಂತ್ರೃ ದಿನದಂದು ಕೊಡುಗೆಯನ್ನು ಶಾಲಾ ಸುಪರ್ದಿಗೆ ಒಪ್ಪಿಸಲಾಗುತ್ತದೆ. ಅದೆ ರೀತಿಯಲ್ಲಿ ನಮ್ಮ ಸಂಸ್ಥೆ ಈ ಶಾಲಾ ಆಟದ ಮೈದಾನಕ್ಕೆ ಗೇಟ್ ನಿರ್ಮಿಸಿದೆ ಎಂದರು.
ಸಂಸ್ಥೆಯ ಸದಸ್ಯ ಮತ್ತು ವಕೀಲ ಎಸ್.ವಿ.ಜಗದೀಶ್ ಮಾತನಾಡಿ, ನಾನು ಸಹ ಈ ಶಾಲೆಯ ವಿದ್ಯಾರ್ಥಿಯಾಗಿದ್ದು, ಬೈಕ್ ಬುಡ್ಡಿಸ್ ಸಂಸ್ಥೆಯರು ನನ್ನನ್ನು ಸಂಪರ್ಕಿಸಿ ಈ ವರ್ಷ ಕೊಡಗೆ ನೀಡಲು ಶಾಲೆಯನ್ನು ಆಯ್ಕೆ ಮಾಡುವಂತೆ ಹೇಳಿದ್ದರು. ಅದರಂತೆ ಈ ಶಾಲೆಯನ್ನು ಆಯ್ಕೆ ಮಾಡಿದೆ, ಸಂಸ್ಥೆ ವತಿಯಿಂದ ಆಟದ ಮೈದಾನಕ್ಕೆ ಗೇಟ್ ನಿರ್ಮಿಸಿಕೊಟ್ಟಿದ್ದಾರೆ ಎಂದರು.
ಶನಿವಾರಸಂತೆ ಗ್ರಾಪಂ.ಸದಸ್ಯ ಶರತ್‌ಶೇಖರ್ ಮಾತನಾಡಿ, ಬೈಕ್ ಬುಡ್ಡಿಸ್ ಸಮಾಜ ಸೇವಾ ಸಂಸ್ಥೆ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಸಲುವಾಗಿ ಶಾಲೆಗಳಿಗೆ ಕೊಡಗೆ ನೀಡುತ್ತಿರುವುದು ಮತ್ತು ನಮ್ಮ ಊರಿನ ಸರ್ಕಾರಿ ಶಾಲೆಗೆ ಗೇಟ್ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಬೈಕ್ ಬುಡ್ಡಿಸ್ ಸಂಸ್ಥೆಯ ನಂದಕುಮಾರ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಮಧು, ಸರೋಜಾ ಶೇಖರ್, ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್, ಸಿಆರ್‌ಪಿ ಸಿ.ಕೆ.ದಿನೇಶ್, ಎಸ್‌ಡಿಎಂಸಿ ಅಧ್ಯಕ್ಷ ಶರಣ್, ಮುಖ್ಯ ಶಿಕ್ಷಕ ವಿಶ್ವನಾಥ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಹೇಶ್, ಪ್ರಮುಖರಾದ ರವಿ, ಪ್ರೇಮ್‌ಕುಮಾರ್ ಮತ್ತಿತರರು ಹಾಜರಿದ್ದರು.