ಜನಸಾಮಾನ್ಯರ ಧ್ವನಿ ಆಗುವ ಪ್ರಾದೇಶಿಕ ಪಕ್ಷ ಸ್ಥಾಪನೆ

kodihalli chandrashekar
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಬಣ)ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್
Published on

ಶಿವಮೊಗ್ಗ: ಸಜ್ಜನಿಕೆಯ ರಾಜಕೀಯ ಪಕ್ಷ ಸ್ಥಾಪಿಸುವ ಉದ್ದೇಶದೊಂದಿಗೆ 2028ರ ವೇಳೆಗೆ ಜನಸಾಮಾನ್ಯರ ಧ್ವನಿ ಆಗುವ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಮುಂದಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಬಣ)ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತೇವೆ. ಕೇಂದ್ರದಿಂದ ಸಿಗಬೇಕಾದ ಅನುದಾನ, ರೈತರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತೇವೆ. ಸ್ವಾವಲಂಬಿ ರಾಜ್ಯದ ಕಲ್ಪನೆ ಹೊಂದಿದ್ದೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಸ್ತುತ ರಾಜ್ಯದಲ್ಲಿ ಆಡಳಿತ ಹಾಗೂ ಪತ್ರಿಪಕ್ಷಗಳ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಹಣ, ಹೆಂಡ, ಜಾತಿ-ಧರ್ಮಗಳನ್ನು ಮುಂದಿಟ್ಟುಕೊಂಡು ಅಧಿಕಾರ ನಡೆಸಲು ಅಜೆಂಡಾ ಸಿದ್ಧಪಡಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೂ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಕಾರ್ಪೊರೇಟ್ ಕಂಪನಿಗಳ ಆಳಾಗಿ ವರ್ತಿಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿಯ ಅಜೆಂಡಾ ಏನು ಎಂಬುದೇ ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು. ದೇಶದಲ್ಲಿ ಕಾಂಗ್ರೆಸ್‌ಗೆ 150 ವರ್ಷದ ಇತಿಹಾಸವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. 1977ರಲ್ಲಿ ರೈತ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದ್ದರು. ಆದರೆ ಇಂದು ಅದೇ ಪಕ್ಷದಿಂದ ಶಾಸಕಾಂಗ ಪಕ್ಷದ ನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದಾರೆ. ಇದು ಅಧಿಕಾರ ಹಿಡಿಯಲು ಹೂಡಿದ ಪಿತೂರಿ ಎಂದು ಕೋಡಿಹಳ್ಳಿ ದೂರಿದರು. ಮತ್ತೊಂದೆಡೆ ಎಚ್.ಡಿ.ದೇವೇಗೌಡ ಅವರು ಮಾಜಿ ಪ್ರಧಾನಿಯಾಗಿದ್ದಾಗ ರಾಜ್ಯಕ್ಕೆ ಪೂರಕವಾದ ಯಾವುದೇ ಯೋಜನೆ ತರಲಿಲ್ಲ. ಪ್ರಸ್ತುತ ಮುಪ್ಪಿನಲ್ಲಿಯೂ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಅಧಿಕಾರ ಕೊಡಿಸಲು ಹವಣಿಸುತ್ತಿದ್ದಾರೆ. ಇದು ರಾಜಕೀಯ ಆರೋಗ್ಯಕರ ಬೆಳವಣಿಗೆಯಲ್ಲ. ಹೊಸ ತಲೆಮಾರಿನ ರಾಜಕಾರಣಕ್ಕೂ ಅವಕಾಶ ನೀಡಬೇಕು ಎಂದರು. ಪ್ರಮುಖರಾದ ಪುಟ್ಟರಾಜ್, ಮಂಜುನಾಥ ಪಾಟೀಲ್, ಉಮೇಶ್ ಪಾಟೀಲ್, ಎಂ.ಮೂರ್ತಿ, ಗುತ್ಯಪ್ಪ ಗಾಮ, ಲೋಕೇಶ್, ಎ.ಡಿ.ಶಿವಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ನಾವಿಂದು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿ ಮಾಡಿಕೊಂಡಿದ್ದೇವೆ. ರಾಜ್ಯದಿಂದ ಅತಿ ಹೆಚ್ಚಿನ ತೆರಿಗೆ ಪಾವತಿಸಲಾಗುತ್ತಿದೆ. ಆದರೆ, ಅದಕ್ಕೆ ಸರಿಯಾದ ರೀತಿಯ ಗೌರವ ಸಿಗುತ್ತಿಲ್ಲ. ಇಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಭ್ರಷ್ಟಾಚಾರವೇ ತುಂಬಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಅಡಿಗಲ್ಲು ಇಡಲಾಗಿದೆ. - ಎಂ.ಗೋಪಿನಾಥ್, ಆಲ್ ಇಂಡಿಯಾ ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net