ಧರ್ಮ ಪಾಲನೆಯಿಂದ ಜಗತ್ತಿನಲ್ಲಿ ಶಾಂತಿ ನೆಲೆ

13-2-2024 KADENANDIHALlI Shikaripur (2)
ಕಡೇನಂದಿಹಳ್ಳಿಯಲ್ಲಿ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿಯನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಲೋಕಾರ್ಪಣೆಗೊಳಿಸಿದರು. ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಶ್ರೀ ಶಿವಶಾಂತವೀರ ಸ್ವಾಮೀಜಿ, ಶ್ರೀ ಶಿವಯೋಗಿ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಗುರುಲಿಂಗ ಸ್ವಾಮೀಜಿ, ಶ್ರೀ ವೀರಭದ್ರ ಸ್ವಾಮೀಜಿ, ಬಿ.ವೈ.ರಾಘವೇಂದ್ರ ಇತರರಿದ್ದರು.
Published on

ಶಿರಾಳಕೊಪ್ಪ: ಧರ್ಮ ಪಾಲನೆಯಿಂದ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ. ಅಂತರಂಗ ಮತ್ತು ಬಹಿರಂಗ ಪರಿಶುದ್ಧಗೊಳಿಸುವ ಶಕ್ತಿ ಶ್ರೀಗುರುವಿಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರಧಾರೆ ಸರ್ವರಿಗೂ ದಾರಿದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ಸಮೀಪದ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ಅನಾವರಣ, ಮಹಾಮಸ್ತಕಾಭಿಷೇಕ ಪುಷ್ಪಾರ್ಚನೆ ನೆರವೇರಿಸಿದ ನಂತರ ಏರ್ಪಡಿಸಿದ್ದ ಧರ್ಮ ಸಂಸ್ಕೃತಿ ಪುನಶ್ಚೇತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಸ್ಕಾರ ಸಂಸ್ಕೃತಿಗಳ ಮೂಲಕ ಜೀವಾತ್ಮ ಪರಮಾತ್ಮನಾಗುವ ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಬೋಧಿಸಿ ಜೀವನ ಉತ್ಕರ್ಷತೆಗೆ ಕಾರಣರಾದವರು ಶ್ರೀ ರೇಣುಕಾಚಾರ್ಯರು. ಗಂಡು-ಹೆಣ್ಣು, ಉಚ್ಛ-ನೀಚ, ಬಡವ-ಬಲ್ಲಿದ ಎನ್ನದೆ ಎಲ್ಲರ ಶ್ರೇಯಸ್ಸಿಗಾಗಿ ಶ್ರಮಿಸಿದ್ದನ್ನು ಮರೆಯಲಾಗದು. ಭೌತಿಕ ಬದುಕಿನಲ್ಲಿ ಸಂಪತ್ತಿನ ಜತೆ ಶಿವಜ್ಞಾನದ ಅರಿವೂ ಮುಖ್ಯ. ಆರೋಗ್ಯ ಪೂರ್ಣ ಸಮಾಜಕ್ಕೆ ಶ್ರಮಿಸಿದ ಕೀರ್ತಿ ಶ್ರೀ ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಇಂಥ ಭವ್ಯ ಸುಂದರ ರೇಣುಕಾಚಾರ್ಯರ ಪುತ್ಥಳಿ ನಿರ್ಮಿಸಿ ಲೋಕಾರ್ಪಣೆಗೈದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಮಾಡಿದ ಸತ್ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಗೆ ಶಿವ ಪೂಜಾ ತಪೋರತ್ನ ಪ್ರಶಸ್ತಿ, ಚಿನ್ನದುಂಗುರ ಮತ್ತು ರೇಷ್ಮೆ ಮಡಿ ಹೊದಿಸಿ ಫಲ ಪುಷ್ಪವಿತ್ತು ಜಗದ್ಗುರುಗಳು ಶುಭ ಹಾರೈಸಿದರು. ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಕಳದ ಶಿಲ್ಪಿ ಕೃಷ್ಣಾ ಆಚಾರ್ಯ, ಶಿವಮೊಗ್ಗ ಶಿಲ್ಪಿ ಜೀವನ್ ಕಲಾಸನ್ನಿಧಿ, ಶಿಕಾರಿಪುರ ಪ್ರಥಮ ದರ್ಜೆ ಗುತ್ತಿಗೆದಾರ ದೇವೇಂದ್ರಪ್ಪ ಅವರಿಗೆ ಪ್ರಶಸ್ತಿ ಮತ್ತು ಗುರುರಕ್ಷೆಯಿತ್ತು ಶ್ರೀಗಳು ಶುಭ ಕೋರಿದರು. ಹಲವಾರು ಗಣ್ಯರು ಮತ್ತು ದಾನಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಬಿಜೆಪಿ ಧುರೀಣ ಕೆ.ಎಸ್. ಗುರುಮೂರ್ತಿ ಮತ್ತು ಎಚ್.ಬಿ.ಬಳಿಗಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕನ್ನೂರು-ಸಿಂಧನೂರು ಶ್ರೀ ಸೋಮನಾಥ ಸ್ವಾಮೀಜಿ, ಚನ್ನಗಿರಿ ಕೇದಾರ ಶ್ರೀ ಶಿವಶಾಂತವೀರ ಸ್ವಾಮೀಜಿ, ಹಾರನಹಳ್ಳಿ ಶ್ರೀ ಶಿವಯೋಗಿ ಸ್ವಾಮೀಜಿ, ಕಾರ್ಜುವಳ್ಳಿಯ ಶ್ರೀ ಸದಾಶಿವ ಸ್ವಾಮೀಜಿ, ಸಂಗೊಳ್ಳಿಯ ಶ್ರೀ ಗುರುಲಿಂಗ ಸ್ವಾಮೀಜಿ, ಕಡೇನಂದಿಹಳ್ಳಿಯ ಶ್ರೀ ವೀರಭದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ಹುಲ್ಲಿನಕೊಪ್ಪ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಶಾಂತಾ ಅನಂದ ಪ್ರಾರ್ಥಿಸಿದರು. ಜ್ಞಾನೇಶ್ವರ ಬಳ್ಳಾರಿ, ಮೆಹಬೂಬ್ ಸಾಬ್ ಹರ್ಲಾಪುರ ಅವರಿಂದ ಸಾಂಸ್ಕೃತಿಕ ಸಂಗೀತ ಸೌರಭ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net