

ಮುಳಬಾಗಿಲು: ಈ ಹಿಂದೆ ಕೋಲಾರ ಜಿಲ್ಲೆ ಪ್ರತಿನಿಧಿಸಿದ್ದ ಶಾಸಕರು, ಸಂಸದರು ಮುಳಬಾಗಿಲು ಕ್ಷೇತ್ರವನ್ನು ಕಡೆಗಣಿಸಿದ್ದರಿಂದ ತಾಲೂಕಿಗೆ ಬರಬೇಕಾಗಿದ್ದ ಕೈಗಾರಿಕೆಗಳು ನರಸಾಪುರ, ವೇಮಗಲ್ ಮತ್ತು ಹೊಸಕೋಟೆ ತಾಲೂಕಿನಲ್ಲಿ ಸ್ಥಾಪನೆಯಾಗಿವೆ. ಮುಳಬಾಗಿಲಿನಲ್ಲೂ ಕೈಗಾರಿಕೆಗಳು ಸ್ಥಾಪನೆಗೆ ಸಾಕಷ್ಟು ಜಾಗವಿದ್ದು, ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಸಂಸದ ಎಂ.ಮಲ್ಲೇಶ್ಬಾಬುಗೆ ಬಿಜೆಪಿ ಹಿರಿಯ ಮುಖಂಡ ಪಿ.ಎಂ.ರಘುನಾಥ್ ನೇತೃತ್ವದ ಬಿಜೆಪಿ ನಿಯೋಗ ಮನವಿ ಸಲ್ಲಿಸಿತು.
ಕೋಲಾರ ತಾಲೂಕು ಕುಂಬಾರಹಳ್ಳಿಯ ಸಂಸದರ ನಿವಾಸದಲ್ಲಿ ಇತ್ತೀಚೆಗೆ ನರೇಂದ್ರ ಮೋದಿ, ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದರಿಗೆ ಮುಳಬಾಗಿಲಿನಲ್ಲಿ ಕೈಗಾರಿಕೆಗಳು ಮಾಡಲು ಇರುವ ಅನುಕೂಲಗಳು ಮತ್ತು ಸರ್ಕಾರಿ ಜಮೀನಿನ ಲಭ್ಯತೆ ಬಗ್ಗೆ ಮಾಹಿತಿ ಒಳಗೊಂಡ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
2013ರಲ್ಲಿ ಜಿಲ್ಲಾಧಿಕಾರಿ ದಿ.ಡಿ.ಕೆ.ರವಿ ಅವರು ತಾಲೂಕಿನ ಅವನಿ ಹೋಬಳಿ ವ್ಯಾಪ್ತಿಯ ದೇವರಾಯಸಮುದ್ರ ಸಮೀಪದ 15 ಸಾವಿರ ಎಕರೆ ಸರ್ಕಾರಿ ಜಮೀನಿನ ಜತೆಗೆ ತಾಲೂಕಿನ ದುಗ್ಗಸಂದ್ರ ಹೋಬಳಿ ಸುತ್ತಮುತ್ತಲ ಗ್ರಾಮಗಳ ಬಳಿ ಇರುವ 10 ಎಕರೆ ಸರ್ಕಾರಿ ಜಮೀನು ಗುರುತಿಸಿ ನೋಟಿಫಿಕೇಷನ್ ಮಾಡಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅಂದಿನ ಜನಪ್ರತಿನಿಧಿಗಳು ನೀರಿನ ಸೌಲಭ್ಯ ಇಲ್ಲವೆಂದು ಮತ್ತೊಂದು ವರದಿ ಸೃಷ್ಟಿಸಿ ಮುಳಬಾಗಿಲನ್ನು ಅಭಿವೃದ್ಧಿ ಕಾಣದಂತೆ ಮಾಡಿದ್ದಾರೆ ಎಂದು ರಘುನಾಥ್ ಆರೋಪಿಸಿದರು.
ಸಂಸದ ಎಂ.ಮಲ್ಲೇಶ್ ಬಾಬು ಪ್ರತಿಕ್ರಿಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮತ್ತೊಮ್ಮೆ ಪ್ರಸ್ತಾವನೆ ಕಳಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಲ್ಲದೆ, ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮೂಲಕ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿಸುವುದಾಗಿ ಬಿಜೆಪಿ ನಿಯೋಗಕ್ಕೆ ಸಂಸದರು ಆಶ್ವಾಸನೆ ನೀಡಿದರು.
ಬಿಜೆಪಿ ಒಬಿಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ನಂಗಲಿ ಕೆ.ಸತೀಶ್ಕುಮಾರ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಬಣಕನಹಳ್ಳಿ ನಟರಾಜ್, ಬಿಕೆಎಸ್ ಜಿಲ್ಲಾ ಖಜಾಂಚಿ ವಕೀಲ ವಿ.ಜಯಪ್ಪ, ಮುಳಬಾಗಿಲು ಬಿಜೆಪಿ ಮುಖಂಡ ಜಿ.ಶಂಕರಪ್ಪ, ಶ್ರೀನಿವಾಸ ಬಾಬು ಇದ್ದರು.
14 ಎಂಬಿಎಲ್ 2
ಮುಳಬಾಗಿಲು ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಕೋಲಾರ ತಾಲೂಕು ಕುಂಬಾರಹಳ್ಳಿಯ ಸಂಸದರ ನಿವಾಸದಲ್ಲಿ ಬಿಜೆಪಿ ಹಿರಿಯ ಮುಖಂಡ ಪಿ.ಎಂ.ರಘುನಾಥ್ ಮನವಿ ಸಲ್ಲಿಸಿದರು. ನಂಗಲಿ ಕೆ.ಸತೀಶ್, ಸಿಎಂಆರ್ ಶ್ರೀನಾಥ್, ಭೋವಿ ಸಂಘದ ಅಧ್ಯಕ್ಷ ಜಿ.ಶಂಕರಪ್ಪ, ನಿವೃತ್ತ ಯೋಧ ಎಂ.ವಿ.ಮೂರ್ತಿ ಇದ್ದರು.