

ಹುಬ್ಬಳ್ಳಿ: ರಾಜ್ಯ ಸರ್ಕಾರವು ತ್ವರಿತ ನ್ಯಾಯಾಲಯ ಸ್ಥಾಪಿಸಿ ಆರೋಪಿಗೆ ಕಠಿಣ ಶಿಕ್ಷಣೆ ವಿಧಿಸಬೇಕು ಎಂದು ಕೂಡಲಸಂಗಮ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮೃತ ಅಂಜಲಿ ಮನೆಗೆ ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂಜಲಿ ಹತ್ಯೆ ಪ್ರಕರಣವು ಬೆಚ್ಚಿ ಬೀಳಿಸಿರುವುದರಿಂದ ನಾಗರಿಕ ಸಮಾಜವು ತಲೆ ತಗ್ಗಿಸುವಂತಾಗಿದೆ. ನೇಹಾ ಹತ್ಯೆ ಬಳಿಕ ರಾಜ್ಯ ಸರ್ಕಾರವು ಎಚ್ಚೆತ್ತುಕೊಳ್ಳಬೇಕಿತ್ತು. ರಾಜ್ಯ ಸರ್ಕಾರವು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ನೋವು ತಂದಿದೆ ಎಂದರು.
ಹುಬ್ಬಳ್ಳಿಯು ಮತ್ತೊಂದು ಬಿಹಾರ ಎನ್ನುವ ಅಪಕೀರ್ತಿ ಪಡೆಯುತ್ತಿದೆ. ಇಂಥ ಘಟನೆಗಳಿಂದ ರಾಜ್ಯದ ಜನರು ಭಯಭೀತರಾಗಿದ್ದಾರೆ. ಅಂಜಲಿ ಕುಟುಂಬದವರು ದೂರು ಕೊಟ್ಟರೂ ಪೊಲೀಸರುಸ್ವೀಕರಿಸಿಲ್ಲ. ಪರಿಣಾಮ ಜೀವ ಕಳೆದುಕೊಳ್ಳುವಂತಾಗಿದೆ. ಪೊಲೀಸರ ವೈಫಲ್ಯದಿಂದ ಈ ಘಟನೆ ನಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು. ಸರ್ಕಾರವು ಅಂಜಲಿ ಕುಟುಂಬಕ್ಕೆ ಪರಿಹಾರ ಹಾಗೂ ಅಂಜಲಿ ಸಹೋದರರಿಗೆ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.