ಸುಗಮ ಸಂಗೀತಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ: ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಆಗ್ರಹ

17
Published on

ಮೈಸೂರು: ಸುಗಮ ಸಂಗೀತಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವ ಅಗತ್ಯವಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದಿಂದ ಹೂಟಗಳ್ಳಿಯ ಶ್ರೀ ಅನಂತೇಶ್ವರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುಗಮ ಸಂಗೀತ ಕಲಿಕಾ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಗಮ ಸಂಗೀತಕ್ಕೆ ಕರ್ನಾಟಕದಲ್ಲಿ ತನ್ನದೇ ಅದ ಇತಿಹಾಸವಿದೆ. ಅನೇಕರು ಸುಗಮ ಸಂಗೀತ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಲು ಅಕಾಡೆಮಿ ಸ್ಥಾಪನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಕಾಡೆಮಿ ಸ್ಥಾಪಿಸಿದಾಗ ಮಾತ್ರ ಸುಗಮ ಸಂಗೀತಕ್ಕೆ ಗಟ್ಟಿ ನೆಲೆ ಸಿಗುತ್ತದೆ. ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅನ್ನು ಕೇವಲ ಹದಿನೈದೇ ದಿನಗಳಲ್ಲಿ ಆರಂಭಿಸಿದ್ದು ಇದಕ್ಕೆ ನಿದರ್ಶನ ಎಂದರು.

ಗಾಯಕನಿಗೆ ಕಲಿಕೆ ಎಂಬುದು ನಿರಂತರ. ಆಗ ಮಾತ್ರ ಗಾಯನ ಪರಿಪಕ್ವವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಕಲಿಕೆ ಇದ್ದೇ ಇರುತ್ತದೆ. ಅದಕ್ಕೆ ಶ್ರದ್ಧೆ, ಪರಿಶ್ರಮ, ನಿರಂತರತೆ ಕಾಪಾಡಿಕೊಂಡು ಹೋಗುವ ಮನಸ್ಸು ಬೇಕು ಎಂದು ಹೇಳಿದರು.

ಶಿಬಿರ ಉದ್ಘಾಟಿಸಿದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ರಾಜ್ಯ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಮಾತನಾಡಿ, ಪರಿಷತ್ ಆರಂಭವಾಗಿ 23 ವರ್ಷಗಳಾಗಿದ್ದು, 12 ಜಿಲ್ಲಾ ಘಟಕಗಳಿವೆ. ಈವರೆಗೆ 17 ರಾಜ್ಯ ಹಾಗೂ ಒಂದು ರಾಷ್ಟ್ರ ಮಟ್ಟದ ಸಮ್ಮೇಳನ ನಡೆಸಲಾಗಿದೆ. ಮೆಸೂರು ಜಿಲ್ಲಾ ಘಟಕವು ನಾಗರಾಜ ವಿ.ಬೈರಿ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದೆ ಎಂದು ಅವರು ಅಭಿನಂದಿಸಿದರು.

ನಾಡಿನ ಇಬ್ಬರು ಪ್ರಮುಖ ಗಾಯಕರಾದ ಬಿ.ವಿ. ಶ್ರೀನಿವಾಸ್ ಹಾಗೂ ನಾಗಚಂದ್ರಿಕಾ ಭಟ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಆದ್ದರಿಂದ ತರಬೇತಿಗೆ ಬಂದವರು ಶ್ರದ್ಧೆಯಿಂದ ಕಲಿಯಿರಿ ಎಂದು ಅವರು ಸಲಹೆ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಮಾತನಾಡಿ, 14 ತಿಂಗಳ ಹಿಂದೆ ಆರಂಭವಾದ ಜಿಲ್ಲಾ ಘಟಕ ಈವರೆಗೆ 28 ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ಕಳೆದ ವರ್ಷ ಕೂಡ ಮೇ ತಿಂಗಳಲ್ಲಿ ಕಲಿಕಾ ಶಿಬಿರ ಏರ್ಪಡಿಸಲಾಗಿತ್ತು. ಈ ವರ್ಷ ಕೂಡ ಏರ್ಪಡಿಸಿದ್ದೇವೆ ಎಂದು ತಿಳಿಸಿದರು.

ಮೈಸೂರಿನ ಜನತೆ ಸಾಕಷ್ಟು ಉತ್ತೇಜನ ನೀಡಿ, ಸುಗಮ ಸಂಗೀತ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅದನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವ ಹಾಗೂ ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಸುಗಮ ಸಂಗೀತ ಕಲಿಕೆ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುವುದಲ್ಲದೇ, ಸಮಾಜಕ್ಕೂ ಉಪಯುಕ್ತವಾಗುತ್ತದೆ. ಯಾವುದೇ ರೀತಿಯ ಕಲಿಕೆಗೆ ನಿಯಮಗಳು ನೇಣು ಆಗಬಾರದು. ಕಲಿಕೆಗೆ ಮುಕ್ತ ಅವಕಾಶ ಇರಬೇಕು ಎಂದರು.

ಎದೆತುಂಬಿ ಹಾಡುವೆನು ಖ್ಯಾತಿಯ ಬಿ.ವಿ. ಶ್ರೀನಿವಾಸ್ ಹಾಗೂ ನಾಗಚಂದ್ರಿಕಾ ಭಟ್ ಅವರು ಎರಡು ದಿನಗಳ ಈ ಶಿಬಿರವನ್ನು ನಡೆಸಿಕೊಡುತ್ತಿದ್ದು, 110 ಮಂದಿ ಪಾಲ್ಗೊಂಡಿದ್ದಾರೆ.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಬಿ.ವಿ.ಪ್ರವೀಣ್ , ಕವಿ ಜಯಪ್ಪ ಹೊನ್ನಾಳಿ, ಜಿಲ್ಲಾ ಉಪಾಧ್ಯಕ್ಷ ನ.ಗಂಗಾಧರಪ್ಪ, ಕಾರ್ಯದರ್ಶಿ ಸಿರಿ ಬಾಲು, ಮಾಧ್ಯಮ ಸಲಹೆಗಾರ ಎನ್.ಬೆಟ್ಟೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net