ಪಂಚಾಕ್ಷರ ಗವಾಯಿಗಳ ಹೆಸರಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿ

16-gdg-4
Published on

ಗದಗ: ಗಾನಯೋಗಿ ಪಂಚಾಕ್ಷರ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಬೇಕು ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಬೆಂಗಳೂರಿನ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿ ಮನವಿ ಸಲ್ಲಿಸಲಾಯಿತು.

ದಕ್ಷಿಣಾದಿ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಳೆರಡರಲ್ಲೂ ಅದ್ವಿತೀಯ ಸಾಧನೆ ಮಾಡಿದ ಪಂ. ಪಂಚಾಕ್ಷರಿ ಗವಾಯಿಗಳು ಉಭಯಗಾನ ವಿಶಾರದರೆನಿಸಿದ್ದಾರೆ. ಅವರು ಸ್ಥಾಪಿಸಿದ ಶ್ರಿ ಕುಮಾರೇಶ್ವರ ಸಂಚಾರಿ ಸಂಗೀತ ವಿದ್ಯಾಲಯ ಮತ್ತು ಗದಗಿನ ಬಸರೀಗಿಡದ ವೀರಪ್ಪನವರ ದಾನದ ಭೂಮಿಯಲ್ಲಿ ಕುಮಾರೇಶ್ವರ ಕೃಪಾಪೋಷಿತ ಸಂಗೀತ ಸಾಹಿತ್ಯ ಮಹಾವಿದ್ಯಾಲಯವು ವೀರೇಶ್ವರ ಪುಣ್ಯಾಶ್ರಮವಾಗಿ ಪುನರ್ ನಾಮಕರಣಗೊಂಡಿರುವ ಆಶ್ರಮವು ಅಂಧರ ಬಾಳಿಗೆ ಬೆಳಕಾಗಿದೆ. ತಮ್ಮ ಬದುಕಿನುದ್ದಕ್ಕೂ ಅಂಧ, ಅನಾಥ ಮಕ್ಕಳಿಗೆ ಅನ್ನ ಆಶ್ರಯವನ್ನಿತ್ತು. ಸಂಗೀತ ಧಾರೆಯೆರೆದು ಆ ಮಕ್ಕಳಿಗೆ ತಂದೆಯಾಗಿ, ಗುರುವಾಗಿ, ಮಾರ್ಗದರ್ಶನ ಮಾಡಿದ್ದಾರೆ. ಅಂತಹ ಮಹಾಮಹಿಮರ ಹೆಸರು ಅಜರಾಮರವಾಗಲು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲು ಗಾನಯೋಗಿ ಪಂಚಾಕ್ಷರ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಬೇಕು ಎಂದು ಕಲ್ಲಯ್ಯಜ್ಜನವರು ಮನವಿಯಲ್ಲಿ ವಿವರಿಸಿದ್ದಾರೆ.

ನಿಯೋಗದಲ್ಲಿದ್ದ ಗಾನಯೋಗಿ ಸಂಗೀತ ಪರಿಷತ್​ನ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಂ. ಚನ್ನವೀರ ಶಾಸ್ತ್ರೀ ಹಿರೇಮಠ (ಕಡಣಿ) ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಗುರುಗಳ ಹೆಸರಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಬೇಕು ಎಂದು ಕೋರಿದರು. ಪಂ. ಹೇಮರಾಜ ಶಾಸ್ತ್ರೀ ಹಿರೇಮಠ ಹೆಡಿಗ್ಗೊಂಡ ಮಾತನಾಡಿ, ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮದಿನವನ್ನು ಸರ್ಕಾರವೇ ಆಚರಿಸುವಂತಾಗಬೇಕು ಎಂದು ಒತ್ತಾಯಿಸಿದರು. ಪರಿಷತ್ ಗೌರವ ಸದಸ್ಯ ಕಲಾವಿದ ಸದಾಶಿವ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net