

ಮೈಸೂರು: ರಂಗಾಯಣದ ಮಾದರಿಯಲ್ಲಿ ಸರ್ಕಾರ ಜಾನಪದ ರಂಗಭೂಮಿ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಸಲಹೆ ನೀಡಿದರು.
ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಂಗಭೂಮಿ ಮತ್ತು ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಕ್ಷಗಾನಕ್ಕೆ ಅಕಾಡೆಮಿ, ಆಧುನಿಕ ನಾಟಕಗಳಿಗೆ ರಂಗಾಯಣ ಇದೆ. ಅದೇ ಮಾದರಿಯಲ್ಲಿಯೇ ಜಾನಪದ ರಂಗಭೂಮಿ ಸಂರಚನೆ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಆಧುನಿಕ ನಾಟಕಗಳಿಗಿಂತಲೂ ಜಾನಪದ ರಂಗಭೂಮಿ ಶಕ್ತಿಶಾಲಿ. ಜಾನಪದ ರಂಗಭೂಮಿ ಎಲ್ಲದಕ್ಕೂ ಬೇರು. ಆದರೆ, ಬೇರನ್ನು ಮರೆತು ಕೊಂಬೆಗಳ ಬಗ್ಗೆ ಮಾತಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸಿದರು.
ಜಾನಪದವನ್ನು ನಗರದವರು ಉಪಭೋಗದ ವಸ್ತುವಾಗಿ ಮಾಡಿದ್ದಾರೆ. ಗಂಭೀರ ಕಲೆಯನ್ನಾಗಿ ನೋಡುತ್ತಿಲ್ಲ. ಆಧುನಿಕ ಕಾಲದಲ್ಲಿ ಗ್ರಾಮೀಣ ಕಲೆಗಳು ಮತ್ತು ನಗರ ಕಲೆಗಳು ಒಂದಾಗಬೇಕು ಎಂದರು.
ಹಿಂದೆ ಚರ್ಮವಾದ್ಯಗಳನ್ನು ಅಸ್ಪಶ್ಯತೆಯಿಂದ ನೋಡಲಾಗುತ್ತಿತ್ತು. ಇವತ್ತು ವಿರೋಧಿಸುತ್ತಿದ್ದವರ ಮನೆಗಳಲ್ಲಿಯೇ ಚರ್ಮವಾದ್ಯಗಳಿವೆ. ಇದನ್ನು ಜಾನಪದ ಪರಂಪರೆಯ ಮೌಲ್ಯ ಮತ್ತು ಸಂಸ್ಕೃತಿಯ ದಾರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.
ಶಿಬಿರದಲ್ಲಿ ಪಾಲ್ಗೊಂಡಿರುವ ಅಭ್ಯರ್ಥಿಗಳಲ್ಲಿ ಕಲಿಯುವ ಆಸಕ್ತಿ ಎಂಬುದು ನಾದಕ್ಕೆ ತಲೆದೂಗುವ ತಬ್ಬಲಿಯ ಕರುವಿನಂತಿರಬೇಕು. ಅಂತಹ ಕರುವಿನ ಗುಣವನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.
ಸಂಸ್ಕೃತಿಯನ್ನು ಜಡತ್ವದಿಂದ ಬಿಡುಗಡೆಗೊಳಿಸಿ: ನಾನು ಮಂಗಳೂರಿನಲ್ಲಿದ್ದಾಗ ಭೂತಾರಾಧನೆ ಸಂಸ್ಕೃತಿಯ ಬಗ್ಗೆ ಲೇಖನ ಬರೆದಿದ್ದೆ. ಆದರೆ, ಆಗ ಅಲ್ಲಿನ ಜನರು ನನ್ನ ಮೇಲೆ ಮುಗಿಬಿದ್ದರು. ದಲಿತ ಕಲಾವಿದರನ್ನು ಸಂಪತ್ತು ಉಳ್ಳವರು ಬಳಸಿಕೊಂಡು ಅವರಿಗೆ ಬೇಕಾದ್ದನ್ನು ಕೊಡುತ್ತಿಲ್ಲ, ಇದು ಬದಲಾಗಬೇಕು ಎಂದಿದ್ದೆ. ಯಾವುದೇ ಸಂಸ್ಕೃತಿ, ಕಲೆಯಾಗಿ ಅದನ್ನು ಸಮಾನೀಕರಣಗೊಳಿಸಬೇಕು. ಆಗಮಾತ್ರ ಅದು ಉಳಿಯಲಿದೆ. ಹೀಗಾಗಿ ರಿಶಬ್ ಶೆಟ್ಟಿ ಅವರು ಭೂತಾರಾಧನೆಯ ವೇಷ ಹಾಕಿ ತೆರೆಯ ಮೇಲೆ ತಂದು ಸಂಸ್ಕೃತಿಯನ್ನು ಜಡತ್ವದಿಂದ ಬಿಡುಗಡೆಗೊಳಿಸಿ ಸಮಾನೀಕರಣಗೊಳಿಸಿದ್ದಾರೆ. ಇದು ನನಗೆ ಸಂಭ್ರಮ ಅನಿಸಿತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ, ರಂಗ ಸಮಾಜದ ಸದಸ್ಯ ಡಾ.ಟಿ.ಆರ್. ಗುರುಪ್ರಸಾದ್, ಪ್ರೊ.ಮೈಸೂರು ಕೃಷ್ಣಮೂರ್ತಿ, ಡಾ.ಆರ್.ಜಯರಾಮ್, ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇದ್ದರು.