ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ: ಮುಖ್ಯಶಿಕ್ಷಕರ-ಪಾಲಕರ ಪಾತ್ರ ಮುಖ್ಯ

17 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್ಸೆಸ್ಸೆಲ್ಸಿ ಪರೀಕ್ಷೆ ಮಕ್ಕಳ ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ. ಹಿಂದಿನ ವರ್ಷ ಪರೀಕ್ಷೆ ಫಲಿತಾಂಶ ಶೇ. 74.85ರಷ್ಟಾಗಿದೆ. ಇದನ್ನು ಶೇ. 100ರಷ್ಟು ಮಾಡುವಲ್ಲಿ ಪಾಲಕರ ಮತ್ತು ಶಾಲಾ ಮುಖ್ಯ ಶಿಕ್ಷಕರ ಪಾತ್ರ ಮುಖ್ಯ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜೆಎಸ್​ಎಸ್​ ಕಾಲೇಜಿನ ಸನ್ನಿಧಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲ ಪ್ರೌಢಶಾಲೆ ಮುಖ್ಯ ಶಿಕ್ಷಕರ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಶಿಕ್ಷಣ, ಸಂವಹನ ಹಾಗೂ ಶಾಲಾ ಆಡಳಿತದ ತಜ್ಞರ ಸಮಿತಿ ರಚಿಸಿ, ಎರಡು ತಿಂಗಳಿಂದ ಮಿಷನ್​ ವಿದ್ಯಾಕಾಶಿ 2024-25ರ ಯೋಜನೆಯಡಿ ವಿವಿಧ ಕ್ರಮಗಳನ್ನು ರೂಪಿಸಲಾಗುತ್ತಿದೆ. ವಿದ್ಯಾಕಾಶಿ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ. ಫಲಿತಾಂಶ ಹೆಚ್ಚಳಕ್ಕೆ ಪ್ರತಿ ಮಗು ತಪ್ಪದೇ ಶಾಲೆಗೆ ಬರಬೇಕು. ಶಿಕ್ಷಕರು ಪಠ್ಯ ಪೂರ್ಣಗೊಳಿಸಲು ಕಟ್ಟು ಬೀಳದೆ, ವಿದ್ಯಾರ್ಥಿಯಲ್ಲಿ ಓದು, ಬರೆಯುವ ಅಭಿರುಚಿ ಬೆಳೆಸಬೇಕು ಎಂದರು.
ಫಲಿತಾಂಶ ಸುಧಾರಣೆ ಕಾರ್ಯದಲ್ಲಿ ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಕ್ರಿಯವಾಗಿ ತೊಡಗಬೇಕು. 2024-25ನೇ ಸಾಲಿನಲ್ಲಿ ನಿರೀಕ್ಷಿತ ಫಲಿತಾಂಶ ಬರದಿದ್ದಲ್ಲಿ ಶಾಲಾವಾರು ಕಾರಣಗಳನ್ನು ಅಧ್ಯಯನ ಮಾಡಿ, ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಫಲಿತಾಂಶ ಬದಲಾವಣೆಗೆ ಪ್ರೀತಿಯಿಂದ ಪಾಲ್ಗೊಳ್ಳಿ ಎಂದರು.
ಮಿಷನ್​ ವಿದ್ಯಾಕಾಶಿ ಯೋಜನೆ ಉಪಾಧ್ಯ ಪ್ರೊ.ಎಸ್​.ಎಂ.ಶಿವಪ್ರಸಾದ ಮಾತನಾಡಿ, ಎಲ್ಲರ ಪ್ರಾಮಾಣಿಕ ಪ್ರಯತ್ನ, ಕಳಕಳಿಯಿಂದ ಮಾತ್ರ ಫಲಿತಾಂಶ ಸುಧಾರಣೆ ಸಾಧ್ಯ. ಇದೊಂದು ಸಾಂಘಿಕ ಪ್ರಯತ್ನವಾಗಬೇಕು ಎಂದರು.
ಜೆಎಸ್​ಎಸ್​ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಅಂತರಾಷ್ಟ್ರೀಯ ಪ್ರೇರಕ ಭಾಷಣಕಾರ ಪ್ರದೀಪ ಆಚಾರ್ಯ, ಹುಡಾ ಆಯುಕ್ತ ಸಂತೋಷ ಬಿರಾದಾರ ಮಾತನಾಡಿದರು. ಡಿಡಿಪಿಐ ಎಸ್​.ಎಸ್​. ಕೆಳದಿಮಠ ಅಧ್ಯಕ್ಷತೆ ವಹಿಸಿದ್ದರು.
ಡಯಟ್​ ಪ್ರಾಚಾರ್ಯೆ ಜಯಶ್ರೀ ಕಾರೇಕರ, ಎಸ್​.ಎಂ. ಹುಡೇದಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net