ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಆರಂಭ

13imam1-Web
ಬೆಳಗಾವಿಯ ಸಿದ್ಧರಾಮೇಶ್ವರ ಸಂಯುಕ್ತ ಪಿಯು ಕಾಲೇಜಿನ ಮೌಲ್ಯಮಾಪನ ಕೇಂದ್ರದಲ್ಲಿ ಸಿಬ್ಬಂದಿಗೆ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ವತಿಯಿಂದ ಸ್ಯಾನಿಟೈಸರ್ ವಿತರಿಸಲಾಯಿತು. ರಾಮು ಗುಗವಾಡ, ರಾಜು ಚಿಕ್ಕನ ಗೌಡರ, ಎಸ್.ಎಸ್.ಬಳಿಗಾರ, ವಿಠ್ಠಲ ಯತ್ನಟ್ಟಿ, ಈರಣ್ಣ ತೋಟದ, ಬಿ.ಬಿ.ನಾವಲಗಟ್ಟಿ ಇತರರು ಇದ್ದರು.
Published on

ಬೆಳಗಾವಿ: ಕರೊನಾ ವೈರಸ್ ಭೀತಿ ನಡುವೆಯೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಂಡಿತು.

ಕರೊನಾ ಸೋಂಕು ಹರಡುವಿಕೆ ದೃಷ್ಟಿಯಿಂದ ನಗರದ 8 ಕೇಂದ್ರಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತು. ಥರ್ಮಲ್ ಸ್ಕ್ರೀನಿಂಗ್ ಮಾಡಿದ ನಂತರವೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಹಾಯಕ ಮೌಲ್ಯಮಾಪಕರು ಮತ್ತು ಸಿಬ್ಬಂದಿಗೆ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಯಿತು. ಎಲ್ಲ ಕೇಂದ್ರಗಳಲ್ಲೂ ಸೋಂಕು ತಡೆ ಔಷಧ ಸಿಂಪಡಿಸಲಾಯಿತು.

ಒಂದು ವಾರದೊಳಗೆ ಪೂರ್ಣ: ಮೌಲ್ಯಮಾಪನ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 1,957 ಸಹಾಯಕ ಮೌಲ್ಯಮಾಪಕರ ಪೈಕಿ 1,636 ಮಂದಿ ಸೇವೆಗೆ ಹಾಜರಾಗಿದ್ದಾರೆ. 321 ಸಹಾಯಕ ಮೌಲ್ಯಮಾಪಕರು ಗೈರಾಗಿದ್ದಾರೆ. ಸೂಕ್ತ ಕಾರಣವಿಲ್ಲದೆ ಗೈರಾಗಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಒಂದು ವಾರದೊಳಗೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಬೆಳಗಾವಿ ಡಿಡಿಪಿಐ ಡಾ.ಎ.ಬಿ.ಪುಂಡಲೀಕ ಹೇಳಿದ್ದಾರೆ. ಮೌಲ್ಯಮಾಪನ ಪ್ರಕ್ರಿಯೆ ಸುಗಮವಾಗಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಯಾವುದೇ ಗೊಂದಲ ತಲೆದೋರಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net