

ಮೈಸೂರು: ಬೇಸಿಗೆಯ ಬಿಸಿಲಿನ ಪ್ರಖರತೆ ತಾರಕಕ್ಕೇರುತ್ತಿರುವ ಕಾರಣ ಬೇಸಿಗೆಯ ಶಾಖದಿಂದ ಆರೋಗ್ಯ ಕಾಪಾಡಿಕೊಳ್ಳಲು ಮಣಿಪಾಲ್ ಆಸ್ಪತ್ರೆಯ ಅಸೋಸಿಯೇಟ್ ಕನ್ಸಲ್ಟೆಂಟ್ - ಇಂಟರ್ನಲ್ ಮೆಡಿಸಿನ್ ಡಾ.ಎಸ್. ಮೇದಿನಿ ಕೆಲವು ಅಗತ್ಯ ಸಲಹೆಗಳನ್ನು ನೀಡಿದ್ದಾರೆ.
ಬೇಸಿಗೆಯಲ್ಲಿ ಅತಿ ದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಡೀಹೈಡ್ರೇಶನ್. ಸಾಕಷ್ಟು ನೀರು ಕುಡಿಯುವ ಮೂಲಕ ನೀವು ಇದನ್ನು ತಡೆಯಬಹುದು. ನಿಮಗೆ ಬಾಯಾರಿಕೆಯಿಲ್ಲದಿದ್ದರೂ ಕೂಡ, ದಿನವಿಡೀ ಸಾಕಷ್ಟು ನೀರನ್ನು ಮತ್ತು ದ್ರವ ಪದಾರ್ಥವನ್ನು ಕುಡಿಯುವುದು ಒಳ್ಳೆಯದು. ಸಾಕಷ್ಟು ನೀರು ಕುಡಿಯುವುದು ಹೈಡ್ರೇಟೆಡ್ ಆಗಿರಲು ಉತ್ತಮ ಮಾರ್ಗವಾಗಿದೆ. ಇದರ ಜತೆಗೆ ನೀವು ಕಲ್ಲಂಗಡಿ, ಸೌತೆಕಾಯಿ ಮತ್ತು ಕಿತ್ತಳೆಯಂತಹ ಹೆಚ್ಚು ನೀರಿನ ಅಂಶವಿರುವ ಫಲಾಹಾರವನ್ನು ಕೂಡ ಸೇವಿಸಬಹುದು. ಸಕ್ಕರೆ ಪಾನೀಯಗಳು ಮತ್ತು ಮದ್ಯವನ್ನು ಕುಡಿಯಬೇಡಿ, ಏಕೆಂದರೆ ಅವುಗಳು ನಿಮ್ಮ ದೇಹದಿಂದ ನೀರಿನ ಅಂಶವನ್ನು ಕಡಿಮೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.