ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ; ಕೋಲಾರದ ಕೆಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ರೈತ ಸಂಘದಿಂದ ಪ್ರತಿಭಟನೆ

10-klr-1
Published on

ಕೋಲಾರ : ಗಗನಕ್ಕೇರುತ್ತಿರುವ ಪಿವಿಸಿ ಪೈಪ್ ಬೆಲೆ ಹಾಗೂ ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ದಿನ ಬಳಕೆ ವಸ್ತುಗಳ ಬೆಲೆ ಇಳಿಸುವ ಜತೆಗೆ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದು ರೈತ ಸಂಘದ ಮುಖಂಡರು ಮಡಕೆ, ಅಕ್ಕಿ-ಬೇಳೆ, ಎಣ್ಣೆ ಮತ್ತು ಕೃಷಿ ಸಲಕರಣೆ ಸಮೇತ ನಗರದ ಕೆಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದ ಸರ್ಕಾರಗಳು ಜನಸಾಮಾನ್ಯರನ್ನು ಬೀದಿಗೆ ತಳ್ಳಿ ಶ್ರೀಮಂತರ ಜೇಬು ತುಂಬಿಸುವತ್ತ ಮುಖ ಮಾಡುತ್ತಿವೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಅಂತರ್ಜಲ ಪ್ರಮಾಣ ಕುಸಿದಿರುವುದರಿಂದ ಶೇ.80 ರೈತರು ಹನಿನೀರಾವರಿ ಪದ್ಧತಿ ಅವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದೀಗ ಪಿವಿಸಿ ಪೈಪಿನ ಬೆಲೆ ಏರಿಕೆ ಆಗಿರುವುದರಿಂದ ಒಂದುಕಾಲು ಇಂಚಿನ 20 ಅಡಿ ಉದ್ದದ ಪೈಪಿನ ಬೆಲೆ 160ರಿಂದ 250 ರೂ, ರೋಲ್ ಡ್ರಿಪ್ ಪೈಪ್ 1600ರಿಂದ 2600ಕ್ಕೆ ಏರಿಕೆಯಾಗಿದೆ. ಒಂದು ಎಕರೆಗೆ ಹನಿ ನೀರಾವರಿ ಅಳವಡಿಸಲು 20,000 ರೂ. ಬದಲಿಗೆ ಈಗ 40,000 ರೂ. ವ್ಯಯಿಸಬೇಕಿರುವುದರಿಂದ ರೈತರು ಹನಿನೀರಾವರಿ ಪದ್ಧತಿ ಕೈಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ದಿನ ಬಳಕೆ ವಸ್ತುಗಳಾದ ತೊಗರಿಬೇಳೆ 90ರಿಂದ 110 ರೂ, ಉದ್ದಿನಬೇಳೆ 80ರಿಂದ 120 ರೂ, ಅಕ್ಕಿ 60ರಿಂದ 77 ರೂ, ಅಡುಗೆ ಎಣ್ಣೆ 125ರಿಂದ 160 ರೂ. ಆಗಿದ್ದು, ಇದಕ್ಕೆ ಸವಾಲೆಸೆಯುವಂತೆ ಪ್ರಯಾಣ ದರ, ಹೋಟೆಲ್ ತಿಂಡಿ ತಿನಿಸುಗಳ ದರ ಏರಿಸುತ್ತಿದ್ದಾರೆ. ಒಟ್ಟಾರೆ ಕೃಷಿ ಕ್ಷೇತ್ರ ನಾಶ ಮಾಡಿ ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡುವ ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ ಧೋರಣೆ ಕೈಬಿಟ್ಟು, ಬೆಂಕಿಯಲ್ಲಿ ಬೇಯುತ್ತಿರುವ ದೇಶದ ಜನಸಾಮಾನ್ಯರನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಶಿರಸ್ತೇದಾರ್ ದಿವಾಕರ್ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು. ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ತಾಲೂಕಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಐತಾಂಡಹಳ್ಳಿ ಮುನ್ನಾ, ಸುಪ್ರೀಂಚಲ, ಚಲಪತಿ, ಚಾಂದ್‌ಪಾಷಾ, ಜಾವೇದ್‌ಪಾಷಾ, ಕಿರಣ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಪ್ಪ, ಆಶ್ವತ್ಥಪ್ಪ, ಸಹದೇವಪ್ಪ, ಚಂದ್ರಪ್ಪ, ಸಂವಾದ ಚಂದ್ರಶೇಖರ್, ಶಾಂತಮ್ಮ, ನವೀನ್ ಕುಮಾರ್, ಭರತ್, ಹರೀಶ್, ಲಕ್ಷಣ್, ಜಗದೀಶ್, ವಿನೋದ್, ವಡಗೂರು ಮಂಜುನಾಥ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net