ವಸತಿ ಗೃಹಕ್ಕಿಲ್ಲ ನಿರ್ವಹಣೆ ಭಾಗ್ಯ

hospital
Published on

ಎನ್​.ಮುನಿವೆಂಕಟೇಗೌಡ ಕೋಲಾರ

ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಆರೋಗ್ಯ ಇಲಾಖೆಯು ತಮ್ಮ ಇಲಾಖೆಯ ವಸತಿ ಗೃಹಗಳ ಬಳಿಯೇ ಸ್ವಚ್ಛತೆ ಇಲ್ಲದಂತಾಗಿದ್ದು, ವಸತಿ ಗೃಹಗಳ ನಿರ್ವಹಣೆ ಇಲ್ಲದೆ ಸೋರುತ್ತಿವೆ. ಬೀದಿ ದೀಪಗಳಿಲ್ಲದೆ ರಾತ್ರಿ ವಿಷಜಂತುಗಳ ಕಾಟದಿಂದ ಸಿಬ್ಬಂದಿ ಬೇಸತ್ತಿದ್ದಾರೆ.

ನಗರದ ಎಸ್​.ಎನ್​.ಆರ್​. ಆಸ್ಪತ್ರೆಯ ಆವರಣದಲ್ಲಿಯೇ ಇರುವ ವಸತಿ ಗೃಹಗಳ ದು@ಸ್ಥಿತಿ ಇದಾಗಿದ್ದು, ಚರಂಡಿಗಳಲ್ಲಿ ಕಸಕಡ್ಡಿ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆಗಳಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು, ಬೀದಿ ದೀಪಗಳು ಕೆಟ್ಟು ಹಲವು ತಿಂಗಳುಗಳೇ ಕಳೆದಿವೆ. ಸುಮಾರು 54 ವಸತಿ ಗೃಹಗಳು ದುರಸ್ತಿ ಆಗಬೇಕಿದ್ದು, ಕೆಲವು ವೈದ್ಯರು ಮತ್ತು ಸಿಬ್ಬಂದಿ ವಸತಿಗೃಹಗಳನ್ನು ತೊರೆಯುಂತೆ ಮಾಡಿದೆ.

ಇನ್ನು ಕೆಲವರು ಸಂಬಂಧಿಕರಿಗೆ ಮತ್ತು ಅರೆಗುತ್ತಿಗೆ ಸಿಬ್ಬಂದಿಗೆ ನೀಡಿದ್ದಾರೆ. ವೈದ್ಯರು ವಾಸಿಸಲು ಯೋಗ್ಯವಲ್ಲದೇ ಇರುವುದರಿಂದ ಕೆಲವು ವೈದ್ಯರು ಖಾಸಗಿಯಾಗಿ ಬಾಡಿಗೆ ಪಡೆದು ಬೇರೆ ಕಡೆಯಿಂದ ಆಸ್ಪತ್ರೆಗೆ ಬರುವಂತಾಗಿದೆ.

ದಾದಿಯರು ಮತ್ತು ಇತರೆ ಸಿಬ್ಬಂದಿ ಹೆಚ್ಚಾಗಿ ವಾಸಿಸುತ್ತಿದ್ದು, ರಾತ್ರಿ ಆಸ್ಪತ್ರೆಗೆ ಬರಬೇಕಾದರೆ ಟಾರ್ಚ್​ ಹಿಡಿದು ಬರುವ ಪರಿಸ್ಥಿತಿ ಬಂದೊದಗಿದೆ. ವಸತಿ ಗೃಹಗಳ ಪಕ್ಕದಲ್ಲಿ ದೊಡ್ಡ ರಾಜಕಾಲುವೆ ಹಾದು ಹೋಗಿದ್ದು, ರಾಜಕಾಲುವೆಯಲ್ಲಿ ತ್ಯಾಜ್ಯ ತುಂಬಿ ಒಂದು ಕಡೆ ದುರ್ವಾಸನೆಯಾದರೆ, ಮತ್ತೊಂದೆಡೆ ಹಾವು&ಚೇಳುಗಳು ವಸತಿ ಗೃಹಗಳ ಆವರಣಕ್ಕೆ ಬರುವಂತಾಗಿದೆ ಎಂದು ಹೆಸರು ಹೇಳಲು ಇಚ್ಛಸದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಜೋರಾಗಿ ಬಂದರೆ ಎಲ್ಲಿ ವಸತಿ ಗೃಹಗಳು ಬೀಳುತ್ತವೆಯೋ ಎಂಬ ಭೀತಿಯಲ್ಲಿ ದಿನಕಳೆಯುವಂತಾಗಿದೆ.

ಸಾರ್ವಜನಿಕರ ಅಲೆದಾಟ

ಎಸ್​.ಎನ್​.ಆರ್​.ಆಸ್ಪತ್ರೆ ಮತ್ತು ವಸತಿ ಗೃಹಗಳನ್ನು ನವೀಕರಣ ಮಾಡಲು 9 ಕೋಟಿ ರೂ. ಮಂಜೂರಾಗಿದೆ. ಕಳೆದ 6 ತಿಂಗಳಿಂದ ಆಸ್ಪತ್ರೆ ನವೀಕರಣ ನಡೆಯುತ್ತಿದೆ. ನವೀಕರಣ ನಿಧಾನಗತಿಯಲ್ಲಿರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೂ ಕಿರಿಕಿರಿಯಾಗಿದೆ. ಆಪರೇಷನ್​ ಥಿಯೇಟರ್​ ವಾರಕ್ಕೆ 3 ದಿನ ಮಾತ್ರ ಲಭ್ಯವಿದ್ದು, ರಿಪೇರಿ ನೆಪ ಹೇಳಿ ರೋಗಿಗಳನ್ನು ತಿರುಗಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಶೇ.40 ಆಸ್ಪತ್ರೆ ವಾರ್ಡ್​ಗಳನ್ನು ನವೀಕರಿಸಲಾಗಿದೆ. ವಸತಿ ಗೃಹಗಳ ನವೀಕರಣವೂ ಇದರಲ್ಲಿ ಸೇರಿದ್ದು, 20 ದಿನಗಳ ನಂತರ ವಸತಿ ಗೃಹ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಆಸ್ಪತ್ರೆಯಾದ ಕಾರಣ ನವೀಕರಣದ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ರೋಗಿಗಳನ್ನು ಕೊಠಡಿಗಳಿಂದ ಸ್ಥಳಾಂತರಿಸಿ ಮತ್ತೆ ನವೀಕರಣ ಮಾಡಬೇಕಾಗಿದೆ. ಗುಣಮಟ್ಟದಿಂದ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಪ್ರಾರಂಭಿಸಿ 6 ತಿಂಗಳಾಗಿದೆ. ಇನ್ನು 6 ತಿಂಗಳ ಕಾಲಾವಕಾಶ ಬೇಕಿದ್ದು, ವಸತಿ ಗೃಹಗಳ ಬಳಿ ವಿದ್ಯುತ್​ ದೀಪ ಅಳವಡಿಸಲಾಗುವುದು. ವಸತಿ ಗೃಹಗಳ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ ಸ್ವಚ್ಛತೆ ಮಾಡುವುದು ನಗರಸಭೆಯವರ ಕರ್ತವ್ಯ.

-ರಾಮಚಂದ್ರ, ಇಂಜಿನಿಯರ್​, ಎಸ್​ಎನ್​ಆರ್​ ಆಸ್ಪತ್ರೆ

ವಸತಿ ಗೃಹಗಳ ಸ್ವಚ್ಛತೆ ಮತ್ತು ನಿರ್ವಹಣೆ ಇಲ್ಲದೇ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೇ ನವೀಕರಣಗೊಳ್ಳುತ್ತಿದೆ. ಚರಂಡಿಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಲಾಗುವುದು. ಬೇರೆಯವರು ಸಿಬ್ಬಂದಿಯ ಹೆಸರಿನಲ್ಲಿ ವಾಸವಿದ್ದರೆ ನವೀಕರಣಗೊಂಡ ನಂತರ ಖಾಲಿ ಮಾಡಿಸಲಾಗುವುದು.

 -ಜಗದೀಶ್​, ಜಿಲ್ಲಾ ಸರ್ಜನ್​, ಎಸ್​ಎನ್​ಆರ್​ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net