

ಮಂಜುನಾಥ ತಿಮ್ಮಯ್ಯ ಮೈಸೂರು
ಎಸ್ಸೆಸ್ಸೆಲ್ಸಿ 3ನೇ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಫಜೀತಿಗೆ ಸಿಲುಕಿಕೊಂಡಿದ್ದು, ಉಪನ್ಯಾಸಕರಿಗೂ ತಲೆಬೇನೆ ಶುರುವಾಗಿದೆ.
ಪಿಯುಸಿ ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆಯುವ ಸಂಕಷ್ಟ ಒಂದೆಡೆಯಾದರೆ ದಾಖಲಾದ ಬಳಿಕ ಪಾಠ- ಪ್ರವಚನ ಲುಕ್ಸಾನದ ಭೀತಿ ಎದುರಾಗಿದೆ. ಜತೆಗೆ, ಈಗಾಗಲೇ ಮುಗಿದು ಹೋಗಿರುವ ಪಾಠವನ್ನು ಇವರಿಗೆ ಹೇಗೆ ಮಾಡಬೇಕು ಮತ್ತು ಹೇಗೆ ಸರಿದೂಗಿಸಬೇಕೆಂಬ ಪೀಕಲಾಟ ಸಹ ಪಿಯುಸಿ ಉಪನ್ಯಾಸಕರಿಗೂ ಶುರುವಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಸಲ ಜಾರಿಯಾದ ಎಸ್ಸೆಸ್ಸೆಲ್ಸಿ-3 ಪರೀಕ್ಷಾ ಪದ್ಧತಿ ಇದೀಗ ಅವರಿಗೆ ಸಮಸ್ಯೆಯನ್ನು ತಂದೊಡ್ಡಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ 3 ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಅಂತಿಮ ಪರೀಕ್ಷೆ ಫಲಿತಾಂಶವು ಆ.26ರಂದು ಪ್ರಕಟವಾಗಿದೆ. ಆದರೆ, ಪಿಯುಸಿ ತರಗತಿಗಳು ಜೂನ್ 1ರಿಂದಲೇ ಆರಂಭವಾಗಿದ್ದು, 3ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪಿಯುಸಿಯ 3 ತಿಂಗಳ ಪಾಠ ನಷ್ಟವಾಗಲಿದೆ. ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣವನ್ನು ಹೆಚ್ಚಿಸುವ ಸದುದ್ದೇಶದಿಂದ ಸರ್ಕಾರವು ದ್ವಿತೀಯ ಪಿಯುಸಿ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿಯಲ್ಲೂ ಮೊದಲ ಬಾರಿಗೆ 3 ಪರೀಕ್ಷೆ ನಡೆಸಿ ಮುಗಿಸಿದೆ. ಈ ಹಂತದಲ್ಲಿ ಯಾವುದೇ ಸಮಸ್ಯೆಗಳು ಎದುರಾಗಿಲ್ಲ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಇದೀಗ ಕೈತೊಳೆದುಕೊಂಡಿದೆ. ಆದರೆ, ಇದು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ತಲೆನೋವುಂಟು ಮಾಡಿದೆ. ಈ ಸಮಸ್ಯೆಯನ್ನು ಪರಿಹಾರ ಮಾಡುವ ಧರ್ಮಸಂಕಷ್ಟದಲ್ಲಿ ಇದು ಹೊಯ್ದಡುತ್ತಿದೆ. ಮತ್ತೊಂದೆಡೆ, ಆ.2ರಿಂದ 8ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ 3ರ ಫಲಿತಾಂಶದಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳು ಸಂತಸಗೊಂಡಿದ್ದು, ಇವರು ಪಿಯುಸಿಗೆ ಸೇರಿದಾಗ ಈವರೆಗೆ ಆಗಿರುವ ಪಾಠವನ್ನು ಅವರಿಗೆ ಹೇಗೆ ಮಾಡಬೇಕು ಎಂಬುದು ಪಿಯುಸಿ ಉಪನ್ಯಾಸಕರ ತೊಳಲಾಟವಾಗಿದೆ.
ಎಸ್ಸೆಸ್ಸೆಲ್ಸಿಗೆ ಹಿಂದೆ 2 ಪರೀಕ್ಷೆಗಳು ಮಾತ್ರ ಇದ್ದವು. ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಅಕ್ಟೋಬರ್‌ನಲ್ಲಿ ಮತ್ತೊಂದು ಪರೀಕ್ಷೆ ನಡೆಸಲಾಗುತ್ತಿತ್ತು. ಅದರಲ್ಲಿ ಉತ್ತೀರ್ಣರಾದವರಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿ ಪ್ರವೇಶಕ್ಕೆ ಅವಕಾಶವಿತ್ತು. ಬಳಿಕ ಪರೀಕ್ಷೆಯನ್ನು ಜೂನ್‌ನಲ್ಲಿ ನಡೆಸಿ ಅದರ ಫಲಿತಾಂಶದ ಆಧಾರದಲ್ಲಿ ಪಿಯುಸಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ವರ್ಷದಿಂದ ಪ್ರತ್ಯೇಕವಾಗಿ 3 ಪರೀಕ್ಷೆ ನಡೆಸಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾಗಿದೆ.
ಈಗ ಪಾಸ್ ಆಗಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಿಯುಸಿ ಪ್ರಥಮ ವರ್ಷಕ್ಕೆ ದಾಖಲಾಗುವುದೇ ಸವಾಲು ಎನಿಸಿದೆ. ಜಿಲ್ಲೆಯಲ್ಲಿ 261 ಪಿಯುಸಿ ಕಾಲೇಜುಗಳಿವೆ. ಈ ಪೈಕಿ ಖಾಸಗಿ ಕಾಲೇಜುಗಳ ಸಂಖ್ಯೆ 151 ಆಗಿದೆ. ಉಳಿದಂತೆ 74 ಸರ್ಕಾರಿ, 31 ಅನುದಾನಿತ, 5 ಇತರ ಇಲಾಖೆಯ ಪಿಯುಸಿ ಕಾಲೇಜುಗಳಿವೆ. ಬಹುತೇಕ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಪಿಯುಸಿ ಪ್ರಥಮ ವರ್ಷದ ಪ್ರವೇಶಾತಿ ಪೂರ್ಣಗೊಂಡಿದ್ದು, ಸೀಟುಗಳೆಲ್ಲ ಭರ್ತಿಯಾಗಿವೆ. ಕೆಲ ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ಸೀಟುಗಳು ಮಾತ್ರ ಖಾಲಿ ಇವೆ. ಇಂತಹ ಕಾಲೇಜುಗಳನ್ನು ಹುಡುಕಿಕೊಂಡು ಹೋಗಿ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಳ್ಳಬೇಕಿದೆ.
ಕೆಲ ಪಿಯುಸಿ ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ರೋಸ್ಟರ್ ಪ್ರಕಾರ ಎಸ್‌ಸಿ-ಎಸ್‌ಟಿ, ಒಬಿಸಿ ಸೇರಿದಂತೆ ವಿವಿಧ ವರ್ಗಗಳಿಗೆ ಮೀಸಲಾಗಿರುವ ಸೀಟುಗಳೆಲ್ಲ ತುಂಬಿವೆ. ಇಂತಹ ಕಡೆ ಏನು ಮಾಡಲು ಸಾಧ್ಯವಿಲ್ಲ. ದಾಖಲಾತಿಯೂ ದೊರೆಯಲ್ಲ. ಆಗ ಸರ್ಕಾರಿ ಪಿಯುಸಿ ಕಾಲೇಜುಗಳ ಕದ ತಟ್ಟುವುದು ಅನಿವಾರ್ಯವಾಗಲಿದೆ. ಮೈಸೂರು ನಗರ ಪ್ರದೇಶ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲೂ ಸೀಟುಗಳು ಭರ್ತಿಯಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ ಕೆಲ ಕಡೆ ಖಾಲಿ ಇವೆ. ಅಲ್ಲಿ ಪ್ರವೇಶಾತಿ ಪಡೆದುಕೊಳ್ಳಲು ಪ್ರಯತ್ನಿಸಬೇಕಿದೆ.
ಕಷ್ಟಪಟ್ಟು ಪ್ರವೇಶಾತಿ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತೊಂದು ತೊಡಕು ಎದುರಾಗಲಿದೆ. ಈಗಾಗಲೇ ಪಿಯುಸಿ ಮೊದಲ ವರ್ಷದ ಮಕ್ಕಳಿಗೆ ಪಾಠಗಳು ನಡೆದು ಮೊದಲ ಪರೀಕ್ಷೆಯೂ ಆಗಿದೆ. ಶೇ.25 ಪಠ್ಯಕ್ರಮದ ಬೋಧನಾ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಈ ಹೊಸ ವಿದ್ಯಾರ್ಥಿಗಳಿಗೆ ಆಗಿರುವ ಪಾಠ ನಷ್ಟವನ್ನು ಸರಿಪಡಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಪಿಯುಸಿಯಲ್ಲಿ ಮೊದಲ ಕಿರು ಪರೀಕ್ಷೆ ಈಗಾಗಲೇ ಆಗಿರುವುದರಿಂದ ಹೊಸದಾಗಿ ಬರುವ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಪರೀಕ್ಷೆ ಮಾಡುವುದು ಯಾವಾಗ? 2 ಬಾರಿ ಅನುತ್ತೀರ್ಣ ಅಥವಾ ಕಡಿಮೆ ಅಂಕ ಕಾರಣದಿಂದ 3ನೇ ಪರೀಕ್ಷೆ ಬರೆದ ಕೆಲವು ಮಕ್ಕಳಿಗೆ ವಿಶೇಷ ತರಗತಿ ಅನುಕೂಲವಾಗಲಿದೆಯೇ ಎಂಬ ಪ್ರಶ್ನೆಗಳೂ ಮೂಡಿವೆ.
ಇಂತಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿ ಅವರ ಗುಂಪು ರಚನೆ ಮಾಡಿ ಅವರಿಗೆ ಪಾಠ ಮಾಡಲು ಪದವಿ ಪೂರ್ವ ಶಿಕ್ಷಣ ಮುಂದಾಗಿದೆ. ಆದರೆ, ಅದು ಅಷ್ಟು ಪರಿಣಾಮಕಾರಿ ಆಗಿರಲಿದೆ ನೋಡಬೇಕಿದೆ.
ಶೇ.12.25 ಫಲಿತಾಂಶ
ಮೈಸೂರು ಜಿಲ್ಲೆಯ ಎಸ್ಸೆಸ್ಸೆಲ್ಸಿ 3ನೇ ಪರೀಕ್ಷಾ ಫಲಿತಾಂಶ ಶೇ.12.25ರಷ್ಟಾಗಿದೆ. 1,559 ಬಾಲಕರು, 605 ಬಾಲಕಿಯರು ಸೇರಿದಂತೆ 2,164 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 182 ಬಾಲಕರು, 83 ಬಾಲಕಿಯರು ಸೇರಿದಂತೆ 265 ಮಕ್ಕಳು ತೇರ್ಗಡೆಯಾಗಿದ್ದಾರೆ. ತೇರ್ಗಡೆ ಪ್ರಮಾಣದಲ್ಲಿ ಶೇ.11.67 ಬಾಲಕರು, ಶೇ.13.72 ಬಾಲಕಿಯರಿದ್ದಾರೆ.
ಎಸ್ಸೆಸ್ಸೆಲ್ಸಿ 3 ಪರೀಕ್ಷೆಯಲ್ಲಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಪಿಯುಸಿ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿಕೊಡಲಾಗುವುದು. ಈಗಾಗಲೇ ಪಿಯುಸಿ ಪ್ರಥಮ ವರ್ಷದಲ್ಲಿ ಪಾಠಗಳು ನಡೆಯುತ್ತಿದ್ದು, ಒಂದು ಪರೀಕ್ಷೆ ಸಹ ಮುಗಿದೆ. ಆದಾಗ್ಯೂ, ಹೊಸದಾಗಿ ಬರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು.ಎಂ.ಮರಿಸ್ವಾಮಿ, ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ