ಪ್ರಬಂಧ, ಚರ್ಚೆ ಸ್ಪರ್ಧೆ: ನೇತ್ರ, ಮಾನ್ಯಗೆ ಪ್ರಥಮ ಸ್ಥಾನ

compitetion
Published on

ಮಡಿಕೇರಿ: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಪ್ರಬಂಧ ಮತ್ತು ಚರ್ಚೆ ಸ್ಪರ್ಧೆಯಲ್ಲಿ ನೇತ್ರ ಮತ್ತು ಮಾನ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.


ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ಪಠ್ಯ ವಿಷಯಗಳಲ್ಲಿ ಸಹಕಾರ ವಿಷಯ ಅಳವಡಿಕೆ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಬಳಕೆ ಮತ್ತು ತಾಂತ್ರಿಕತೆ ಅಳವಡಿಕೆಯಿಂದ ಮಾತ್ರವೇ ಸಹಕಾರಿ ಚಳುವಳಿ ಬಲ್ಯಾಡ್ಯಗೊಳ್ಳಬಲ್ಲದು ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆ ನಡೆಯಿತು. ಆರಂಭದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ನಂತರದಲ್ಲಿ ಪದವಿಪೂರ್ವಕಾಲೇಜು ವಿದ್ಯಾರ್ಥಿಗಳು ವಿಷಯದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ಚರ್ಚಾ ಸ್ಪರ್ಧೆ ಕಾಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ.ರವಿ ಬಸಪ್ಪರವರು ವಹಿಸಿದ್ದರು. ಚರ್ಚಾ ಸ್ಪರ್ಧೆಯ ತೀರ್ಪುಗಾರರಾಗಿ ಸಹಕಾರ ಸಂಘಗಳ ಸಹಾಯಕ ನಿರ್ಬಂಧಕ ಶೈಲಜಾ, ಯೂನಿಯನ್ ನಿರ್ದೇಶಕ ಕೆ.ಎಂ.ತಮ್ಮಯ್ಯ, ಕೆ.ಐ.ಸಿ.ಎಂ.ನ ಪ್ರಾಂಶುಪಾಲ ಡಾ.ಆರ್.ಎಸ್.ರೇಣುಕಾ ಹಾಗೂ ಪ್ರಬಂಧ ಪತ್ರಿಕೆಯ ಮೌಲ್ಯಮಾಪಕರಾಗಿ ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲ ಎಂ.ಎಂ.ಶ್ಯಾಮಲಾ ನಿರ್ವಹಿಸಿದರು.


ವಿಜೇತರ ವಿವರ: ಪ್ರಬಂಧ ಸ್ಪರ್ಧೆಯಲ್ಲಿ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ಎಚ್.ಎಸ್.ನೇತ್ರ ಪ್ರಥಮ ಸ್ಥಾನ ಪಡೆದರೆ, ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯ ಎಂ.ಎನ್.ಪ್ರೇರಣ ದ್ವಿತೀಯ ಹಾಗೂ ಮೂರ್ನಾಡುವಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಎ.ಬಿ.ಕೃತಿಕ ತೃತೀಯ ಸ್ಥಾನ ಪಡೆದರು. ಕುಶಾಲನಗರದ ಮೌಲಾನಾ ಆಜಾದ್ ಮಾದರಿ ಶಾಲೆಯ ಮೊಹಮ್ಮದ್ ಉಮರ್ ಸಾದ್‌ಗೆ ಸಮಾದಾನಕರ ಬಹುಮಾನ ನೀಡಲಾಯಿತು.


ಚರ್ಚಾ ಸ್ಪರ್ಧೆಯಲ್ಲಿ ಕುಶಾಲನಗರದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಎಚ್.ಎ.ಮಾನ್ಯ ಪ್ರಥಮ ಸ್ಥಾನ ಪಡೆದರೆ, ಗೋಣಿಕೊಪ್ಪಲುವಿನ ಲಯನ್ಸ್ ಪದವಿಪೂರ್ವ ಕಾಲೇಜಿನ ಅದ್ವಿಕ ದ್ವಿತೀಯ ಹಾಗೂ ಮಡಿಕೇರಿಯ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನ ಬನಿತ್ ಬೋಜಣ್ಣ ತೃತೀಯ ಸ್ಥಾನ ಪಡೆದರು. ಗೋಣಿಕೊಪ್ಪಲುವಿನ ಕಾವೇರಿ ಪದವಿ ಪೂರ್ವ ಕಾಲೇಜಿನ ಎ.ವಿಪಿನ್ ಸಮಾದಾನಕರ ಬಹುಮಾನ ಪಡೆದುಕೊಂಡರು.


ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ.ಮಾದಯ್ಯ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುದ್ಧ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net