ವಿದ್ಯಾರ್ಥಿಗಳು ಸಮ್ಮೇಳನದ ವೈಭವ ಕಣ್ತುಂಬಿಕೊಳ್ಳಿ: ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಅರವಿಂದ್ ಹೇಳಿಕೆ

Essay competition Mandya
Published on

ಮಂಡ್ಯ: ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೈಭವವನ್ನು ನೋಡಿ ಕಣ್ತುಂಬಿಸಿಕೊಳ್ಳಿ ಎಂದು ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಪೊಲೀಸ್ ಕಾಲನಿಯ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಮಂಡ್ಯ ಘಟಕ, ಬದುಕು ಬೆಳಕು ಸೇವಾ ಸಮಿತಿ, ನಿವೃತ್ತ ಶಿಕ್ಷಕ ಕೆ.ಮಾಹಿಗಶೆಟ್ಟಿ ಸೇವಾ ಸಮಿತಿ, ಡಾ.ರಾಮೇಗೌಡ ಬಳಗದಿಂದ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಕವಿಗೋಷ್ಠಿ ಮತ್ತು ಸಾಹಿತಿಗಳ ಪರಿಚಯ ಪ್ರಬಂಧ ಸ್ಪರ್ಧೆ, ವಿಜೇತರಿಗೆ ಬಹುಮಾನ, ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ನೆಲದಲ್ಲಿ 3ನೇ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ಸೌಭಾಗ್ಯ. ಈ ಸಾಹಿತ್ಯದ ಹಬ್ಬವನ್ನು ನೋಡುವುದಕ್ಕಾಗಿ ಹೋಗುವುದನ್ನು ಮರೆಯಬೇಡಿ ಎಂದು ನುಡಿದರು.

ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ವೈಭವವನ್ನು ಕಣ್ತುಂಬಿಕೊಳ್ಳಲು ಪಾಲಕರು ಅಥವಾ ಶಿಕ್ಷಣ ಸಂಸ್ಥೆಯೊಂದಿಗೆ ಹೋಗಿ. ನಾವು ಪದವಿ ಓದುತ್ತಿದ್ದಾಗ 48ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು. ಅದೊಂದು ಅವಿಸ್ಮರಣೀಯ ಗಳಿಗೆ. ನಮ್ಮಲ್ಲಿ ದೊಡ್ಡ ಸಾಹಿತಿಗಳಾದ ಕುವೆಂಪು, ಬೇಂದ್ರೆ ರೀತಿ ಆಗಬಯಸುವವರು ಇರಬಹುದು. ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಾಹಿತಿ ಡಾ.ಪ್ರದೀಪ್‌ಕುಮಾರ ಹೆಬ್ರಿ ಮಾತನಾಡಿ, ಸುಂದರವಾದ ಬದುಕು ರೂಪಿಸಿಕೊಳ್ಳಲು ಓದು ಒಂದು ಮಾರ್ಗ. ಅಂದವಾದ ಮೊಗದಲ್ಲಿ ನಗು ಎಷ್ಟು ಚಂದವೋ ಹಾಗೆಯೇ ಉನ್ನತ ಶಿಕ್ಷಣ, ಉದ್ಯೋಗವು ಬದುಕಿಗೆ ಚಂದ. ನಮ್ಮ ಬದುಕು ಇನ್ನೊಬ್ಬರಿಗೆ ಪ್ರೇರಣೆಯಾಗುವಂತೆ ಕ್ರಿಯಾತ್ಮಕವಾಗಿ, ಕೌಶಲತೆಯಿಂದ ಜೀವನ ಕಟ್ಟಿಕೊಳ್ಳಬೇಕು. ಶೈಕ್ಷಣಿಕ ಜೀವನದಲ್ಲಿ ಇರುವ ವಿದ್ಯಾರ್ಥಿ ಒಂದು ಗುರಿ ಇರಿಸಿಕೊಂಡು ಓದಬೇಕು. ಗುರಿ ಸಾಧನೆಗಾಗಿ ಹಂಬಲಿಸಬೇಕು. ಆಗಮಾತ್ರ ಎಲ್ಲವು ಸುಲಭವಾಗಿ ದೊರಕುತ್ತವೆ ಎಂದು ಸಲಹೆ ನೀಡಿದರು.

ಸಿರಿಗನ್ನಡ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಎಂ.ಲೋಕೇಶ್, ಕಸಾಪ ನಗರಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ್, ಮಹಿಳಾ ಠಾಣೆ ಸಬ್ ಇನ್ಸ್‌ಪೆಕ್ಟರ್ ಸವಿತಾ ಪಾಟೀಲ್, ಸಹಶಿಕ್ಷಕಿ ಡಾ.ಕೆ.ಸಭಾನಾ, ಡಾ.ಅರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net