

ಮಂಡ್ಯ: ದಾಸ ಸಾಹಿತ್ಯದ ಪರಂಪರೆಯಲ್ಲಿ ಪುರಂದರದಾಸರು ಅಗ್ರಗಣ್ಯರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಬಣ್ಣಿಸಿದರು.
ನಗರದ ಲಕ್ಷ್ಮೀಜನಾರ್ಧನ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರೌಢಶಾಲಾ ಪುರಂದರದಾಸರು ಮತ್ತು ವಾಗ್ಗೇಯಕಾರರ ಪ್ರಬಂಧ ಸ್ಪರ್ಧೆ ವೇಳೆ ಮಾತನಾಡಿದ ಅವರು, ವ್ಯಾಸರಾಯರ ಮಾರ್ಗದರ್ಶನದಲ್ಲಿ ಪುರಂದರದಾಸರು ಸುಮಾರು 4.75 ಲಕ್ಷ ಸಾಹಿತ್ಯವನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕನಕದಾಸರು ಮತ್ತು ಪುರಂದರದಾಸರು ದಾಸ ಸಾಹಿತ್ಯದ ಪರಂಪರೆಯಲ್ಲಿ ಮೇರು ವ್ಯಕ್ತಿಗಳಾಗಿ ಬೆಳೆದವರು ಎಂದರು.
ಅತ್ಯಂತ ಶ್ರೀಮಂತರಾಗಿದ್ದ ಪುರಂದರದಾಸರು ಸಮಾಜದಲ್ಲಿ ಕಂಡ ಅನೇಕ ಅಸಮತೋಲನ, ಸಮಸ್ಯೆಗಳು, ಜಾತಿ, ಭೇದ ಭಾವಗಳನ್ನು ಕಂಡು ಎಲ್ಲವನ್ನು ಭಗವಂತನಿಗೆ ಅರ್ಪಿಸಿ ಶರಣಾದರು. ಬಳಿಕ ಭಗವಂತನ ನಾಮಸ್ಮರಣೆಯಲ್ಲಿ ಸಾಹಿತ್ಯ ರಚನೆಗೆ ಮುಂದಾದರು. ಪುರಂದರದಾಸರು ಚನ್ನಪಟ್ಟಣದ ಮಳೂರಿಗೆ ಆಗಮಿಸಿ ಪಕ್ಕದಲ್ಲಿ ವ್ಯಾಸ ಸಮುದ್ರ ಕೆರೆಯನ್ನು ಅಭಿವೃದ್ಧಿಪಡಿಸಿದರು. ಬಳಿಕ ಅಪ್ರಮೇಯ ದೇವಾಲಯದಲ್ಲಿ ಆಡಿಸಿದಳು ಯಶೋಧಾ ಎಂಬ ಗೀತ ಸಾಹಿತ್ಯವನ್ನು ರಚಿಸಿದರು. ನಂತರ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿ ಪವಡಿಸು ಪರಮಾತ್ಮ ಎಂಬ ಭಕ್ತಿ ಸಾಹಿತ್ಯವನ್ನು ರಚಿಸಿದರು ಎಂದು ವಿವರಿಸಿದರು.
ಪ್ರಮುಖ ಅಂಶವೆಂದರೆ ಪುರಂದರದಾಸರು ಮಂಡ್ಯಕ್ಕೆ ಬಂದಿದ್ದರು ಎಂಬ ವಿಚಾರ ಬಹುತೇಕ ಜನರಿಗೆ ತಿಳಿದಿಲ್ಲ. ಅವರು ಮಂಡ್ಯದ ನೆಲಕ್ಕೆ ಕಾಲಿಟ್ಟಿದ್ದು ನಮ್ಮ ಸುದೈವವಾಗಿದೆ. ಇಂತಹ ಮಹನೀಯರ ಹೆಸರಿನಲ್ಲಿ ದಾಸ ಸಾಹಿತ್ಯ ಮತ್ತು ವಾಗ್ಗೇಯಕಾರರ ಪ್ರಬಂಧ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಅಧೀನ ಕಾರ್ಯದರ್ಶಿ ಎಸ್.ಉಷಾ, ನಿವೃತ್ತ ಪ್ರಾಂಶುಪಾಲೆ ವೈ.ಪಿ.ಉಮಾದೇವಿ, ಕೆ.ಭಾಸ್ಕರ್, ವಿ.ಶ್ರೀನಿವಾಸ, ಎನ್.ಜೆ.ಲತಾ, ಎಚ್.ವಿ.ಧನಲಕ್ಷ್ಮೀ, ಎನ್.ಚಂದ್ರಮ್ಮ, ಎಂ.ವಿ.ಚಂದ್ರಕಲಾ, ಎಂ.ಆರ್.ನಾಗಮೋಹನ್, ಆರ್.ಎಸ್.ವಸಂತಾ ಇತರರಿದ್ದರು. ಜಿಲ್ಲೆಯ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.