

ಮಂಡ್ಯ: ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಬ್ಬರೂ ಸ್ವಾರ್ಥಮನೋಭಾವವನ್ನೇ ಹೆಚ್ಚಾಗಿ ಬೆಳೆಸಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿ. ಅದನ್ನು ಬಿಟ್ಟು ಸೇವಾ ಮನೋಭಾವವನ್ನು ಬೆಳೆಸಿಕೊಂಡಾಗ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ಕಿವಿಮಾತು
ನಗರದ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ ಅಮ್ಮ ಪ್ರಬಂಧ ಸ್ಪರ್ಧೆ ಹಾಗೂ ಗುರುಕುಲ ತಿಲಕ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ವೈಯುಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜಕ್ಕಾಗಿ ಕೊಡುಗೆ ನೀಡಬೇಕೆಂಬ ಮನೋಭಾವ ಕಡಿಮೆಯಾಗುತ್ತಿದೆ. ಆಧುನೀಕತೆಯ ಅಬ್ಬರದಲ್ಲಿ ಕುಟುಂಬ, ಪರಿಸರ, ಗೆಳೆತನ, ಗ್ರಾಮೀಣ ಪ್ರದೇಶಗಳ ಪ್ರೀತಿಯನ್ನು ಜನತೆ ಮರೆಯುತ್ತಿದ್ದಾರೆ. ಹಣದ ಹಿಂದೆ ಓಡುವುದನ್ನು ಬಿಟ್ಟು ಗುಣದ ಹಿಂದೆ ಓಡುವುದನ್ನು ಮಕ್ಕಳಿಗೆ ಕಲಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದರು.
ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಓದಿದ ಮಕ್ಕಳು ಪಟ್ಟಣ ಸೇರಿ ಹೆತ್ತವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ವಿದ್ಯೆ ಕಲಿಸಿದ ಗುರುಗಳ ಮೇಲೆ ಮಕ್ಕಳಿಗೆ ಭಕ್ತಿ ಪ್ರೀತಿ ಕ್ಷೀಣಿಸುತ್ತಿದೆ. ಕೆಲ ವರ್ಷದ ಹಿಂದೆ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಮದುವೆಯಾದರೂ ಬಾಲ್ಯದ ಗುರುಗಳನ್ನು ಕಂಡಾಗ ಭಕ್ತಿ ಪ್ರೀತಿ ಕಡಿಮೆಯಾಗುತ್ತಿರಲಿಲ್ಲ. ಅಂದಿನ ಗುರುಗಳು ಉತ್ತಮ ಶಿಷ್ಯರನ್ನು ರೂಪಿಸುತ್ತಿದ್ದರು. ಆದರೀಗ ಗುರು-ಶಿಷ್ಯರ ಸಂಬಂಧ ಗಟ್ಟಿಯಾಗಿ ಉಳಿದಿಲ್ಲ. ಕಾಲೇಜುಗಳಲ್ಲಿ ಅಧ್ಯಾಪಕರನ್ನು ಏಕವಚನದಲ್ಲೇ ಮಾತನಾಡಿಸುವ ಕೀಳುಮಟ್ಟದ ಪ್ರೌವೃತ್ತಿ ಬೆಳೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮತ್ತು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿದರು. ಕೃಷಿಕ್ ಲಯನ್ಸ್ ಸಂಸ್ಥೆಯ ಪೋಷಕ ಕೆ.ಟಿ.ಹನುಮಂತು, ಯುವ ಸಾಹಿತಿ ಎಚ್.ಆರ್.ಕನ್ನಿಕಾ, ಸಮಾಜಸೇವಕ ಬಿ.ಎಂ.ಅಪ್ಪಾಜಪ್ಪ, ಗಂಟಗೌಡನಹಳ್ಳಿ ರಾಮಚಂದ್ರು, ವೇದಿಕೆ ಅಧ್ಯಕ್ಷ ಪೋತೇರ ಮಹದೇವು ಇತರರಿದ್ದರು.
ಇದೇ ವೇಳೆ ಕೊತ್ತತ್ತಿರಾಜು, ಕೆ.ಎಸ್.ನಂದಿನಿ, ಬಸವರಾಜು, ಎಸ್.ಪಾಪಣ್ಣ, ಎನ್.ಸಿ.ಮಾದೇಗೌಡ, ಬಿ.ಎಸ್.ಮಂಜುನಾಥ್, ಜಯಮ್ಮ, ಎನ್.ಸಾಯಿಕೃಪಾ, ಕೆ.ಆರ್.ನಾಗರಾಜರಾವ್, ಸುನೀತಾ ವಿಜಯೇಂದ್ರ ಅವರಿಗೆ ಗುರುಕುಲತಿಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತೆಯೇ ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.