

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ವಿಜಯವಾಣಿ ಸಹಯೋಗದಲ್ಲಿ ತಾಲೂಕಿನ ಮೇದಶ್ರೀ ಒಲಂಪಿಯಾಡ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಕಾಲೇಜು ವಿದ್ಯಾರ್ಥಿನಿಯರು ವಿಶೇಷ ಆಸಕ್ತಿ ವಹಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಭವಿಷ್ಯ ಭಾರತ ನಿರ್ಮಾಣದಲ್ಲಿ ಯುವಜನರ ಪಾತ್ರವೇನು ಎಂಬ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ಬರವಣಿಗೆ ಮೂಲಕ ಅನಾವರಣಗೊಳಿಸಿದರು.
ಸಾಮಾಜಿಕ ಮಾಧ್ಯಮಗಳು, ಕೃತಕ ಬುದ್ಧಿಮತ್ತೆ, ತಂತ್ರಜ್ಞಾನದ ಆವಿಷ್ಕಾರ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಯುವಜನರು ಹೇಗೆ ತೊಡಗಿಸಿಕೊಳ್ಳಬೇಕು, ಯಾವುದು ಒಳಿತು, ಯಾವುದು ತಪ್ಪು? ಇವೆಲ್ಲವುಗಳ ಸಂಗಮವಾಗಿ ಭವಿಷ್ಯದ ಭಾರತ ನಿರ್ಮಾಣದಲ್ಲಿ ಯುವಜನರು ವಹಿಸಬಹುದಾದಂತ ಮಹತ್ತರ ಪಾತ್ರದ ಬಗ್ಗೆ ವಿದ್ಯಾರ್ಥಿಗಳು ಪ್ರಬಂಧದ ರೂಪದಲ್ಲಿ ವಿಷಯಪಡಿಸಿದ್ದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ತಾಲೂಕಿನ ಆದಿತ್ಯ ಕಾಲೇಜಿನ ವಿದ್ಯಾರ್ಥಿನಿಯರೂ ಭಾಗವಹಿಸಿ ಉತ್ಸಾಹದಿಂದ ಪ್ರಬಂಧ ಬರೆದರು.
ಭ್ರಷ್ಟಾಚಾರ ನಿರ್ಮೂಲವಾಗಬೇಕು: ಜಾತಿ ಪದ್ಧತಿ, ಭ್ರಷ್ಟಾಚಾರ ನಿರ್ಮೂಲನೆ, ಕೋಮುವಾದ ತಡೆಗೆ ಯುವಕರು ಮುಂದಾಗಬೇಕು, ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು, ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳು ನಿಖರವಾದ ಮಾಹಿತಿ ನೀಡಿ ಭಾರತದ ಅಭಿವೃದ್ದಿ ಬಗ್ಗೆ ಯೋಚನಾ ಮನೋಭಾವ ಬೀರಬೇಕು, ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಜಾತಿ ಧರ್ಮ ಲಿಂಗದ ತಾರತಮ್ಯವಿಲ್ಲದೆ ಸಮಾನತೆ ಸಾರಿ ಹಕ್ಕುಗಳ ಜತೆ ತಮ್ಮ ಕರ್ತ್ಯವ್ಯಗಳನ್ನು ಚಾಚೂ ತಪ್ಪದೆ ನಿರ್ವಹಿಸಲು ಯುವಸಮೂಹ ಮುಂದಾಗಬೇಕು ಎಂಬ ಬಗ್ಗೆ ಹಲವು ವಿದ್ಯಾರ್ಥಿಗಳು ಪ್ರಬಂಧದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಜತೆ ತಂತ್ರಜ್ಞಾನದಿಂದ ವಂಚನೆ ಭ್ರಷ್ಟಾಚಾರ ತಡೆಗೂ ಮುಂದಾಗಬೇಕು, ದೇಶದ ಬೆನ್ನೆಲುಬಾದ ರೈತರಿಗೆ ಸೈನಿಕರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂಬ ಸಲಹೆಗಳು ವ್ಯಕ್ತವಾದವು. ಪಾಲಕರು ಮಕ್ಕಳನ್ನು ಕೇವಲ ವೈದ್ಯ, ಇಂಜಿನಿಯರ್, ರಾಜಕೀಯದಂತ ಕ್ಷೇತ್ರಗಳಿಗೆ ಒತ್ತು ನೀಡದೆ ತಮ್ಮ ಮಕ್ಕಳನ್ನು ರೈತರನ್ನಾಗಿಸಿ, ಸೈನಿಕನನ್ನಾಗಿ ದೇಶಕ್ಕೆ ಕೊಡುಗೆ ನೀಡುವ ಪ್ರಯತ್ನ ಮಾಡುವುದು ಒಳಿತು ಎಂಬ ಭಾವನೆ ವ್ಯಕ್ತವಾಯಿತು. ರಾಜಕಾರಣದಲ್ಲಿ ಸ್ವಾರ್ಥ, ಧರ್ಮಾಂಧತೆ ದ್ವೇಷಭಾವನೆ ತೊಲಗಬೇಕು, ಯುವಸಮೂಹ ಮೂಡನಂಬಿಕೆ ಕಂದಾಚಾರಗಳಿಂದ ಮುಕ್ತವಾಗಬೇಕು, ಇಂತಹ ವಿಚಾರಗಳಲ್ಲಿ ಅಗ್ರಗಣ್ಯರಾಗಿ ಸ್ಪೂರ್ತಿದಾಯಕರಾಗಿ ಸ್ವಾಮಿ ವಿವೇಕಾನಂದರ ಮಾತುಗಳನ್ನು ದೇಶದ ಪ್ರತಿ ಯುವಕರು ಪಾಲಿಸಬೇಕು ಆಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂಬ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳು ಪ್ರಬಂಧದ ಮೂಲಕ ವ್ಯಕ್ತಪಡಿಸಿದರು.
ಸೂಪರ್ ಪವರ್ ದೇಶವಾಗಲಿದೆ: ಮೇದಶ್ರೀ ಒಲಂಪಿಯಾಡ್ ಶಾಲೆ ಅಧ್ಯಕ್ಷ ಅಬಕಾರಿ ಶ್ರೀನಿವಾಸಯ್ಯ ಮಾತನಾಡಿ ಪ್ರಪಂಚದಲ್ಲಿ ಇಂದಿಗೂ ಅತಿ ಹೆಚ್ಚು ಯುವಕರಿರುವ ದೇಶ ನಮ್ಮ ಭಾರತ ಮಾತ್ರ, ಯುವಕರಲ್ಲಿನ ಶಕ್ತಿಯನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಂಡಲ್ಲಿ ಕೆಲವೇ ಕೆಲ ವರ್ಷಗಳಲ್ಲಿ ಪ್ರಪಂಚದ ಸೂಪರ್ ಪವರ್ ದೇಶ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು. ಆದರೆ ದೇಶದ ಪರಿಸ್ಥಿತಿಯನ್ನು ಸೂಕ್ತವಾಗಿ ಬಳಸಿಕೊಳ್ಳದೆ ಕೇವಲ ಸ್ವಾರ್ಥ, ಅಸೂಯೆಗಳ ಬೆನ್ನುಹತ್ತಿದ ಕೆಲವರಿಂದ ದೇಶ ಹಾಳಾಗುತ್ತಿದೆ, ಯುವ ಸಮೂಹವನ್ನು ನಿಧಾನವಾಗಿ ನಶೆಯ ಲೋಕಕ್ಕೆ ತಳ್ಳುವ ಕೆಲಸ ಕಾಣದ ಕೈಗಳು ಮಾಡುತ್ತಿವೆ, ಕಾಣದ ಕೈಗಳನ್ನು ಬೆಂಬಲಿಸುವ ಕೈಗಳಿದ್ದು ಅವುಗಳನ್ನು ಕತ್ತರಿಸುವ ಕೆಲಸವಾಗಬೇಕು ಎಂದು ಹೇಳಿದರು.