

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಿರ್ಮಾಣವಾಗಿರುವ ಕಾರ್ಮಿಕರ ವಿಮಾ ಆಸ್ಪತ್ರೆ (ಇಎಎಸ್‌ಐ) ಆಸ್ಪತ್ರೆ ಉದ್ಘಾಟನೆಗೆ ಹಿಡಿದ ಗ್ರಹಣ ಬಿಡುವ ಲಕ್ಷಣ ಕಾಣುತ್ತಿಲ್ಲ. ಸಾವಿರಾರು ಕಾರ್ಮಿಕರ ಆರೋಗ್ಯ ಭದ್ರತೆ ದೃಷ್ಟಿಯಲ್ಲಿ ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಕಟ್ಟಡ ಅನಾಥವಾಗಿದೆ.
ಏಷ್ಯಾದಲ್ಲಿ ಅತೀ ದೊಡ್ಡ ಕೈಗಾರಿಕಾವಲಯಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ಲಕ್ಷಾಂತರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ದಿನೆ ದಿನೇ ಹೊಸ ಹೊಸ ಕೈಗಾರಿಕೆಗಳು ಕಾರ್ಯಾರಂಭ ಮಾಡುತ್ತಿದ್ದರು ದೊಡ್ಡಮಟ್ಟದ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಆದರೆ ಇಂಥ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಚಿಕಿತ್ಸೆ ಮತ್ತಿತರ ಸೌಲಭ್ಯಕ್ಕೆ ಪರದಾಡುವಂತಾಗಿದೆ.
ಸಂಘಟನೆಗಳ ಮನವಿ: ದೊಡ್ಡಬಳ್ಳಾಪುರದಲ್ಲಿನ ಇಎಸ್‌ಐ ಆಸ್ಪತ್ರೆ ಉದ್ಘಾಟಿಸಬೇಕು ಕಾರ್ಮಿಕರಿಗೆ ಆರೋಗ್ಯ ಸೇವೆ ಆರಂಭಿಸಬೇಕು ಎಂಬ ಕೂಗೆದ್ದಿದ್ದು, ಅನೇಕ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ಹಾದಿ ಹಿಡಿಯಲು ಸಜ್ಜಾಗಿವೆ. ಈಗಾಗಲೇ ಜಿಲ್ಲಾಧಿಕಾರಿ, ಸಚಿವರು ಹಾಗೂ ಶಾಸಕರು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಆಗ್ರಹಿಸುತ್ತಿರುವ ಸಂಘಟನೆಗಳು ಶೀಘ್ರದಲ್ಲೇ ಉದ್ಘಾಟನೆಗೆ ಮುಂದಾಗದಿದ್ದರೆ ರಸ್ತೆ ತಡೆಯಂಥ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಲು ಮುಂದಾಗಿವೆ.
ರಾಜಕೀಯ ವಾಸನೆ: ಕಳೆದ ವಿಧಾನಸಭೆ ಚುನಾವಣೆ ಬಳಿಕ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಶಾಸಕರು ಅಧಿಕಾರ ಹಿಡಿದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೊಡ್ಡಬಳ್ಳಾಪುರವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಹರಿದಾಡುತ್ತಿದೆ. ಇದರ ಮಧ್ಯೆ ಉದ್ಘಾಟನೆಗೆ ಕಾದಿರುವ ಕಾಮಗಾರಿಗಳಿಗೂ ಉದ್ಘಾಟನೆ ಭಾಗ್ಯ ದೊರೆಯುತ್ತಿಲ್ಲ ಎಂಬ ಅಸಮಾಧಾನ ಕೇಳಿಬರುತ್ತಿದೆ. ಈ ಪಟ್ಟಿಗೆ ದೊಡ್ಡಬಳ್ಳಾಪುರ ಇಎಸ್‌ಐ ಆಸ್ಪತ್ರೆಯೂ ಹೊರತಾಗಿಲ್ಲ ಎಂಬುದು ಈ ಭಾಗದ ಜನರ ಆಕ್ರೋಶವಾಗಿದೆ.
2 ವರ್ಷವಾದರೂ ನನೆಗುದಿಗೆ: ಸುಮಾರು 4ವರ್ಷದ ಹಿಂದೆ ಕಟ್ಟಡ ಕಾಮಗಾರಿಗೆ ಚಾಲನೆ ದೊರೆಯಿತು, ಕಟ್ಟಡ ಕಾಮಗಾರಿ ಪೂರ್ಣಗೊಂಡು 2 ವರ್ಷವೇ ಕಳೆಯುತ್ತಾ ಬಂದಿದೆ. ಆದರೂ ಆಸ್ಪತ್ರೆ ಉದ್ಘಾಟನೆ ಮಾಡದೆ ಮೀನಮೇಷ ಎಣಿಸುತ್ತಿರುವುದು ಏಕೆ ಎಂಬುದು ಸ್ಥಳೀಯರಿಗೆ ಯಕ್ಷಪ್ರಶ್ನೆಯಾಗಿದೆ.
ಇಎಸ್‌ಐ ಹಾಸ್ಪಿಟಲ್ ಕಟ್ಟಡ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಈ ಭಾಗದ ಕಾರ್ಮಿಕರಿಗೆ ವೈದ್ಯಕೀಯ ಸೇವೆ ಸಿಗುತ್ತಿಲ್ಲ.ಇಲ್ಲಿಯ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ಇಎಸ್‌ಐ ಹಾಸ್ಪಿಟಲ್ಗಾಗಿ ದೂರದ ಬೆಂಗಳೂರಿಗೆ ಹೋಗಿಬರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಭಾಗದಲ್ಲಿ 250ಕ್ಕೂ ಹೆಚ್ಚು ಕಾರ್ಖಾನೆಗಳಿವೆ, 80 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಥಳೀಯವಾಗಿ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸುವ ಮೂಲಕ ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು.
ಎಂ.ನಾಗರಾಜ್, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ನಾಗರಾಜ್
ಇಎಸ್‌ಐ ಆಸ್ಪತ್ರೆ ಸೇವೆ ಪ್ರತಿ ಕಾರ್ಮಿಕರಿಗೂ ಅತಿ ಮುಖ್ಯವಾಗಿದೆ, ಈ ಭಾಗದಲ್ಲಿ ಹೆಚ್ಚಾಗಿ ರೈತಾಪಿ ಜನ ವಾಸಿಸುತ್ತಾರೆ. ಇವರ ಮಕ್ಕಳು ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾದಲ್ಲಿ ಕಾರ್ಮಿಕರು ಬೆಂಗಳೂರಿಗೆ ಹೋಗಬೇಕಾಗುತ್ತದೆ ನಮ್ಮಲ್ಲೇ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದು ಇನ್ನು ಪ್ರಾರಂಭಗೊಳ್ಳದೆ ಇರುವುದು ವಿಪರ್ಯಾಸವೇ ಸರಿ
ಶಶಿಧರ್, ಕನ್ನಡ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ