

ಮಡಿಕೇರಿ:
ಮಲೆನಾಡು ಜಿಲ್ಲೆ ಕೊಡಗಿಗೆ ಇಎಸ್‌ಐ ಆಸ್ಪತ್ರೆ ಬೇಕು ಎನ್ನುವ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಜಿಲ್ಲೆಗೂ ಒಂದು ಇಎಸ್‌ಐ ಆಸ್ಪತ್ರೆ ಸೌಕರ್ಯ ಒದಗಿಸುವ ನಿಲುವನ್ನು ಅಂದಿನ ಕಾರ್ಮಿಕ ಸಚಿವರು ವ್ಯಕ್ತಪಡಿಸಿದ್ದರಾದರೂ ನಂತರ ಆ ವಿಷಯದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಇದೀಗ ರಾಜ್ಯದವರೇ ಕೇಂದ್ರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿರುವುದರಿಂದ ಸ್ವಲ್ಪ ಪ್ರಯತ್ನ ಪಟ್ಟರೆ ಇದೇನೂ ಕಷ್ಟವಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
ಪುಟ್ಟ ಜಿಲ್ಲೆ ಕೊಡಗು ದೊಡ್ಡ ಪ್ರಮಾಣದ ಕೈಗಾರಿಕೆಗಳಿಂದ ವಂಚಿತವಾಗಿದ್ದರೂ ಕಾಫಿ ಮತ್ತು ಕಾಫಿ ಸಂಬAಧಿತ ಉತ್ಪನ್ನಗಳ ಮಧ್ಯಮ ಮತ್ತು ಸಣ್ಣ ಪ್ರಮಾಣದ ಸಾಕಷ್ಟು ಕೈಗಾರಿಕೆಗಳನ್ನು ಹೊಂದಿದೆ. ಕೊಡಗಿನ ಏಕೈಕ ಕೈಗಾರಿಕಾ ಪ್ರದೇಶ ಕುಶಾಲನಗರ ತಾಲೂಕಿನ ಕೂಡ್ಲೂರುವಿನಲ್ಲಿ ಕಾರ್ಯಾಚರಿಸುತ್ತಿದೆ. 250 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಕಾಫಿಗೆ ಸಂಬAಧಿಸಿದ ಕೈಗಾರಿಕಾ ಘಟಕಗಳು ಪ್ರಾಧಾನ್ಯತೆ ಪಡೆದುಕೊಂಡಿದ್ದರೂ ಪೀಠೋಪಕರಣ, ಇಂಜಿನಿಯರಿAಗ್ ಸೇರಿದಂತೆ ಇತರ ಸಣ್ಣಪುಟ್ಟ ಕೈಗಾರಿಕೆಗಳನ್ನು ಒಳಗೊಂಡು 104 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 5 ಸಾವಿರದಷ್ಟು ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ.
ಟಾಟಾ, ಬಿಬಿಟಿಸಿ ಸಂಸ್ಥೆ ಸೇರಿ ದೊಡ್ಡ ದೊಡ್ಡ ಕಂಪೆನಿಗಳ ಕಾಫಿ ತೋಟಗಳು ಒಳಗೊಂಡAತೆ 10 ಹೆಕ್ಟೇರ್‌ಗಿಂತೂ ಹೆಚ್ಚು ವಿಸ್ತೀರ್ಣ ಹೊಂದಿರುವ 440 ಮತ್ತು 10 ಹೆಕ್ಟೇರ್‌ಗಿಂತಲೂ ಕಡಿಮೆ ವಿಸ್ತೀರ್ಣದ 40 ಸಾವಿರದ 447 ಮಂದಿ ಕಾಫಿ ಬೆಳೆಗಾರರು ಕೊಡಗಿನಲ್ಲಿ ಇದ್ದಾರೆ. 69 ಸಾವಿರದ 850 ಹೆಕ್ಟೇರ್ ಪ್ರದೇಶದಲ್ಲಿ ರೋಬಸ್ಟಾ ಹಾಗೂ 25 ಸಾವಿರದ 40 ಹೆಕ್ಟೇರ್ ಪ್ರದೇಶದಲ್ಲಿ ಅರೆಬಿಕಾ ಕಾಫಿ ಬೆಳೆಯಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಅವಲಂಭಿಸಿರುವ ಕಾಫಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಗಿರುವುದರಿಂದ ಸಹಜವಾಗಿ ಇಲ್ಲಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮವೂ ಕೊಡಗಿನಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು ರೆಸಾರ್ಟ್, ಹೊಟೇಲ್, ಹೋಮ್‌ಸ್ಟೇ, ಪ್ರವಾಸೋದ್ಯಮ ಚಟುವಟಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ಸಾವಿರಾರು ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ನಿರ್ಮಾಣ ಕಾರ್ಮಿಕರು, ಕೂಲಿಕಾರ್ಮಿಕರು ಸೇರಿದಂತೆ ವಿವಿಧ ರೀತಿಯ ಕಾರ್ಮಿಕ ವರ್ಗವೂ ದೊಡ್ಡ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಇದೆ. ಆದರೆ ಇಎಸ್‌ಐ ಸಂಸ್ಥೆ ಕಾರ್ಮಿಕರ ಚಿಕ್ಕಪುಟ್ಟ ಸಮಸ್ಯೆಗಳಿಗೆ, ಆರೋಗ್ಯ ಸಂಬAಧಿ ದಾಖಲಾತಿಗಳನ್ನು ನಿರ್ವಹಿಸಲು ಮಡಿಕೇರಿಯಲ್ಲಿ ವ್ಯವಸ್ಥೆಯೊಂದನ್ನು ಮಾಡಿಕೊಟ್ಟಿರುವುದು ಹೊರತುಪಡಿಸಿದಂತೆ ಇಎಸ್‌ಐ ಸೌಲಭ್ಯಗಳು ಜಿಲ್ಲೆಯ ಕಾರ್ಮಿಕರಿಗೆ ಸರಿಯಾಗಿ ಸಿಗುತ್ತಿಲ್ಲ.
ಕಾರ್ಮಿಕರ ರಾಜ್ಯ ವಿಮಾ ನಿಗಮದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 18 ಸಾವಿರದಷ್ಟು ಕಾರ್ಮಿಕರು ಸದ್ಯಕ್ಕೆ ಇಎಸ್‌ಐ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. 5 ಸಾವಿರದಷ್ಟು ಕಾರ್ಮಿಕರು ವಿಮಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆದರೆ ಜಿಲ್ಲೆಯಲ್ಲಿ ಇಎಸ್‌ಐ ಕಚೇರಿ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಮತ್ತು ಇಎಸ್‌ಐ ಸೌಲಭ್ಯಗಳ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿದರೆ ಈ ಸಂಖ್ಯೆ ಸುಮಾರು 3 ಲಕ್ಷ ಮೀರಬಹುದು ಎನ್ನುತ್ತಾರೆ ಕಾರ್ಮಿಕ ಮುಖಂಡರು.
ವಿವಿಧ ಹಂತದಲ್ಲಿ ದುಡಿಯುತ್ತಿರುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕೊಡಗಿನಲ್ಲಿ ಇಎಸ್‌ಐ ಆಸ್ಪತ್ರೆಯೇ ಇಲ್ಲ. ತನ್ನ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಸೇವೆ ಕೊಡಲು ಟಾಟಾ ಕಾಫಿ ಸಂಸ್ಥೆ ತನ್ನದೇ ಆದ ಸ್ವಂತ ಆಸ್ಪತ್ರೆಯನ್ನು ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ಹೊಂದಿದೆ. ಕಾರ್ಮಿಕರಿಗೆ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಎದುರಾದರೆ ಜಿಲ್ಲೆಗೆ ಸಮೀಪದಲ್ಲಿರುವ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆಯೇ ಆಗಿದೆ. ಇದು ಕೊಡಗಿನ ಬಹುತೇಕ ಕಾರ್ಮಿಕರಿಗೆ ಇನ್ನು ಕೂಡ ಕೈಗೆಟುಕುತ್ತಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳ ಜೊತೆ ಇಎಸ್‌ಐ ಒಡಂಬಡಿಕೆ ಮಾಡಿಕೊಂಡಿದ್ದರೂ ಕಾರ್ಮಿಕರಿಗೆ ಅದರ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಾಗ ಆಸ್ಪತ್ರೆಗಳಿಗೆ ಹಣ ಸುರಿಯುವ ಅನಿವಾರ್ಯತೆ ಕೊಡಗಿನ ಕಾರ್ಮಿಕರದ್ದಾಗಿದೆ.
ಈ ಹಿನ್ನೆಲೆಯಲ್ಲಿ ಕೊಡಗಿಗೆ ಒಂದು ಇಎಸ್‌ಐ ಆಸ್ಪತ್ರೆ ಬೇಕು ಎನ್ನುವ ಬೇಡಿಕೆಯನ್ನು ಈ ಹಿಂದಿನಿAದಲೂ ಸಂಬAಧಿಸಿದವರ ಗಮನಕ್ಕೆ ತರಲಾಗುತ್ತಿದೆ. ಆದರೆ ಈ ಸಂಬAಧ ಯಾವುದೇ ಪ್ರಗತಿ ಇಲ್ಲಿಯ ತನಕ ಆಗಿಲ್ಲ. ಜಿಲ್ಲೆಗೆ ಒಂದು ಇಎಸ್‌ಐ ಆಸ್ಪತ್ರೆ ಬೇಕು ಎನ್ನುವುದು ಸರ್ಕಾರದ ನಿಲುವಾಗಿದ್ದು, ಈ ಸಂಬAಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್ ಹೇಳಿದ್ದರು. ಆದರೆ ಈ ವಿಷಯ ನಂತರ ಪ್ರಗತಿ ಕಾಣಲಿಲ್ಲ.
ಕೊಡಗಿನ ಕಾರ್ಮಿಕರ ಉಪಯೋಗಕ್ಕೋಸ್ಕರ ಕುಶಾಲನಗರ ಬಳಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಆರಂಭಿಸಿದರೆ ಸೂಕ್ತ ಎನ್ನುವುದು ಸ್ಥಳೀಯರ ಅಭಿಪ್ರಾಯ. ಈ ಬಗ್ಗೆ ಕಾರ್ಮಿಕ ಮುಖಂಡರು ಹಲವು ಬಾರಿ ಸಂಬAಧಿಸಿದವರ ಗಮನ ಸೆಳೆದಿದ್ದಾರೆ. ಕುಶಾಲನಗರ ಬಳಿ 30 ಹಾಸಿಗೆಯ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬಗ್ಗೆ ಹಿಂದಿನ ಮೈಸೂರು-ಕೊಡುಗ ಸಂಸದ ಪ್ರತಾಪ್ ಸಿಂಹ ಹಿಂದೊಮ್ಮೆ ಮಾಹಿತಿ ನೀಡಿದ್ದರು. ಇದಕ್ಕೆ ಕನಿಷ್ಠ 4 ಎಕರೆ ಜಾಗದ ಅಗತ್ಯವಿದ್ದು, ಅದನ್ನು ಗುರುತಿಸುವಂತೆ ಜಿಲ್ಲಾ ಅಭಿವÊದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆಯನ್ನೂ ಕೊಟ್ಟಿದ್ದರು. ಇದು ಕೂಡ ಯಾವುದೇ ಪ್ರಗತಿ ಕಾಣಲಿಲ್ಲ. ಈ ಮಧ್ಯೆ ಜಿಲ್ಲೆಗೆ ಕನಿಷ್ಠ 100 ಹಾಸಿಗೆಗಳ ಆಸ್ಪತ್ರೆ ಬೇಕು ಎನ್ನುವುದು ಇಲ್ಲಿಯ ಕಾರ್ಮಿಕ ಮುಖಂಡರ ಬೇಡಿಕೆ. ವಿಷಯವನ್ನು ಹಾಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗಮನಕ್ಕೂ ತರಲಾಗಿದ್ದು, ಅವರಿಂದ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.
ಪ್ರವಾಸೋದ್ಯಮ, ಕಾಫಿ, ರಬ್ಬರ್, ಟೀ ಎಸ್ಟೇಟ್ ಸೇರಿದಂತೆ ಸುಮಾರು 3 ಲP್ಷÀದಷ್ಟು ಕಾರ್ಮಿಕರು ಜಿಲ್ಲೆಯಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಅನುಕೂಲಕ್ಕಾಗಿ ಕೊಡಗಿಗೆ ಒಂದು ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಬೇಕು. ಎಲ್ಲಾ ಕಾರ್ಮಿಕರನ್ನು ಇಎಸ್‌ಐ ಅಡಿಯಲ್ಲಿ ತರುವುದರ ಜತೆಗೆ ಆಸ್ಪತ್ರೆ ಸ್ಥಾಪನೆಗೆ ಕೂಡಲೇ ಕ್ರಮವಹಿಸುವಂತಾಗಬೇಕು.
ಪಿ.ಆರ್. ಭರತ್, ಕಾರ್ಮಿಕ ಮುಖಂಡ
ಕೊಡಗು ಪ್ರವಾಸೋದ್ಯಮ ಮತ್ತು ಕಾಫಿ ಉದ್ಯಮದಲ್ಲಿ ಪ್ರಗತಿ ಸಾಧಿಸುತ್ತಿದೆ. ಎರಡೂ ಉದ್ಯಮದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕುಶಾಲನಗರದಲ್ಲಿ ಕೈಗಾರಿಕಾ ಬಡಾವಣೆಯೂ ಇದೆ. ಹಾಗಾಗಿ ಇಲ್ಲಿನ ಕಾರ್ಮಿಕರ ಅನುಕೂಲಕ್ಕಾಗಿ ಜಿಲ್ಲೆಗೆ ಒಂದು ಇಎಸ್‌ಐ ಆಸ್ಪತ್ರೆ ಬೇಕು. ಈ ಸಂಬAಧ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಗಿದೆ.
ಬಿ.ಆರ್. ನಾಗೇಂದ್ರ ಪ್ರಸಾದ್, ಅಧ್ಯಕ್ಷ, ಚೇಂಬರ್ ಆಫ್ ಕಾಮರ್ಸ್, ಕೊಡಗು
ಕೊಡಗಿಗೆ ಇಎಸ್‌ಐ ಆಸ್ಪತ್ರೆ ಅಗತ್ಯತೆ ಬಗ್ಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಮನವಿ ಬಂದಿದೆ. ಇಎಸ್‌ಐ ಆಸ್ಪತ್ರೆಯಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲಗಳಿದೆ. ರಾಜ್ಯದವರೇ ಆದ ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿದ್ದು, ವಿಷಯವನ್ನು ಅವರ ಗಮನಕ್ಕೆ ತರಲಾಗುವುದು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ