ಅಮಿತ್ ಷಾ ಕರೆ ಮೇರೆಗೆ ನಾಳೆ ಈಶ್ವರಪ್ಪ ದೆಹಲಿಗೆ

Eshwarappa
ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಇದ್ದರು.
Published on

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಷಾ ನನಗೆ ಕರೆ ಮಾಡಿ ಮಾ.3ರ ಸಂಜೆ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ನನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನೀವು ಪಕ್ಷದ ಹಿರಿಯ ನಾಯಕರು. ನಿಮ್ಮಂಥವರು ಪಕ್ಷದ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ. ನಿಮ್ಮ ಸ್ಪರ್ಧೆಗೆ ಕಾರಣವೇನೆಂದು ಅಮಿತ್ ಷಾ ಕೇಳಿದರು. ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕೀಯ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಗೆ ನೋವುಂಟಾಗಿರುವ ಬಗ್ಗೆ ಅವರಿಗೆ ವಿವರಿಸಿದ್ದೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂರು ತಿಂಗಳ ಹಿಂದೆಯೇ ಈ ಎಲ್ಲ ಸಂಗತಿಗಳನ್ನು ನಿಮ್ಮ ಗಮನಕ್ಕೆ ತಂದಿದ್ದೆ. ಆದರೆ ನೀವು ಏನೂ ಕ್ರಮ ಕೈಗೊಂಡಿಲ್ಲ. ನಾನು ದೆಹಲಿಗೆ ಬರಲು ಸಿದ್ಧ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಒತ್ತಡ ಹೇರಬಾರದು ಎಂದು ಅಮಿತ್ ಷಾ ಅವರಲ್ಲಿ ಮನವಿ ಮಾಡಿದ್ದೇನೆ ಎಂದರು.
ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಅಮಿತ್ ಷಾ ಅವರಂತಹ ನಾಯಕ ಕರೆದಾಗ ಅದನ್ನು ತಿರಸ್ಕರಿಸುವುದು ಸೌಜನ್ಯವಲ್ಲ. ಈ ಕಾರಣಕ್ಕಾಗಿ ದೆಹಲಿಗೆ ಹೋಗುತ್ತಿದ್ದೇನೆ. ಚುನಾವಣೆ ಸ್ಪರ್ಧೆ ಬಗ್ಗೆ ಈಗಾಗಲೇ ಹಿತೈಷಿಗಳೊಂದಿಗೆ ಚರ್ಚಿಸಿ ಮುಂದಡಿ ಇಟ್ಟಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಂದೂ ಸೂಚನೆ ಮೀರಲಿಲ್ಲ: ನಾನು ಎಂದೂ ಪಕ್ಷದ ನಾಯಕರು ಹಾಗೂ ಸಂಘದ ಸೂಚನೆ ಮೀರಲಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿ ಹಿಂದುಳಿದವರನ್ನು ಸಂಘಟಿಸಿದೆ. ಅದು ಒಂದು ಹಂತಕ್ಕೆ ಬಂತು ಎಂದಾಗ ಯಡಿಯೂರಪ್ಪ ಕೇಂದ್ರ ನಾಯಕರಿಗೆ ದೂರು ನೀಡಿ ಆ ಸಂಘಟನೆ ಕೈ ಬಿಡಬೇಕೆಂಬ ಸೂಚನೆ ಕೊಡಿಸಿದರು. ಅದನ್ನು ಪಾಲಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ. ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿ ಎಂದು ನಾಯಕರು ಸೂಚಿಸಿದಾಗ ಅದನ್ನೂ ಪಾಲಿಸಿದೆ. ಈಗ ಮೊದಲ ಬಾರಿಗೆ ಎಲ್ಲ ಸೂಚನೆಗಳನ್ನು ಮೀರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನಾನು ಏಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂಬುದನ್ನು ದೆಹಲಿ ನಾಯಕರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net