

ಶಿವಮೊಗ್ಗ: ಬಿಜೆಪಿಯಿಂದ ಯಾವ ಕಾರಣಕ್ಕೆ ನಾನು ಹೊರಬಂದೆ ಎಂಬುದರ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ. ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ನಾನು ಹೋಗುವುದಿಲ್ಲ. ಕೆಲ ಹಿರಿಯರ ಬಳಿ ಚರ್ಚಿಸಿ ಮತ್ತೆ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಬೇರೆ ಪಕ್ಷಗಳ ನಾಯಕರು, ಮುಖಂಡರು ನನಗೆ ಮತ್ತು ನನ್ನ ಮಗನಿಗೆ ಉತ್ತಮ ಸ್ಥಾನ ಕೊಡುವುದಾಗಿ ಆಹ್ವಾನ ನೀಡುತ್ತಿದ್ದಾರೆ. ಆದರೆ ನಾನು ಬಿಜೆಪಿಯಿಂದ ಬಂದವನು. ಹಾಗಾಗಿ ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷ ಸೇರ್ಪಡೆ ಬಗ್ಗೆಯೂ ನನ್ನ ಆಲೋಚನೆ ಇಲ್ಲ. ನಾನು ಹೋಗುವುದೂ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುರುಬ ಸಮಾಜದ ಕೆಲ ನಾಯಕರು ಸಭೆ ನಡೆಸಿ ಬಿಜೆಪಿಗೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ. ಅದು ನನ್ನ ಮೇಲೆ ಅವರಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ. ನಾನು ಬಿಜೆಪಿಗೆ ಬರಬೇಕೆಂಬುದು ಹಲವರ ಆಸೆ ಕೂಡ ಆಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ಕೆಲ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಮಾಡುತ್ತೇನೆ ಎಂದರು.
ಹಿಂದುತ್ವ ಯಶಸ್ವಿಯಾದರೆ ಕುರುಬರು, ಬ್ರಾಹ್ಮಣರು, ದಲಿತರೂ ಯಶಸ್ವಿ ಆದಂತೆ. ಕುರುಬರು ಕೂಡ ಹಿಂದು ಸಮಾಜದ ಒಂದು ಭಾಗವೇ ಆಗಿದ್ದಾರೆ. ಸಮಾಜದ ಮುಖಂಡರು ಸಭೆ ನಡೆಸಿ ನನ್ನ ಮೇಲಿನ ಪ್ರೀತಿ-ವಿಶ್ವಾಸದಿಂದ ಆಹ್ವಾನ ನೀಡಿದ್ದಾರೆ. ಅವರೆಲ್ಲರ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು.