

ಹುಬ್ಬಳ್ಳಿ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಅವರು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಅಮಿತ್‌ಶಾ ಅವರು ಈಶ್ವರಪ್ಪ ಅವರನ್ನು ಭೇಟಿಗೆ ಕರೆದಿದ್ದರು ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಭೇಟಿಗೆ ಅವಕಾಶ ಕೊಟ್ಟಿಲ್ಲವೆಂಬುದೂ ತಿಳಿದಿದೆ. ನಾನು ಸತ್ಯಾಸತ್ಯತೆ ಪರಿಶೀಲನೆ ಮಾಡುವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪಕ್ಷಕ್ಕೆ ಬನ್ನಿ ಎಂದು ಯಾರೂ ಕರೆದಿಲ್ಲ. ಅವರಿಗೆ ಯಾವುದೇ ಸಿದ್ಧಾಂತವೂ ಇಲ್ಲ. ಜೆಡಿಎಸ್‌ನಲ್ಲಿದ್ದಾಗ ಸಿದ್ದರಾಮಯ್ಯ ಅವರು ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ವಾದ್ರಾ ಅವರನ್ನು ಬೈದಿದ್ದಾರೆ. ನಾವೂ ಕೂಡ ಈ ರೀತಿ ಬೈಯ್ಯಲು ಸಾಧ್ಯವಿಲ್ಲ. ಅನಿಸಿಕೊಂಡಿರುವ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರ ಮುಖ ನೋಡಬಾರದು. ಇಂಥವರು ಈಗ ರಾಹುಲ್‌ಗಾಂಧಿ ಮುಂದೆ ಸೊಂಟ ಬಗ್ಗಿಸಿ ನಿಲ್ಲುತ್ತಾರೆ. ಇವರನ್ನು ಈ ಬಾರಿ ಸಿಎಂ ಮಾಡದೇ ಇದ್ದಿದ್ದರೆ ಅವರ ನಿಜ ಬಣ್ಣ ಗೊತ್ತಾಗುತ್ತಿತ್ತು ಎಂದು ಕುಟುಕಿದರು.
ಬಸವರಾಜ ಬೊಮ್ಮಾಯಿ ಅವರು ಯಾವ ರೀತಿಯಲ್ಲಿ ರಾಜ್ಯ ಸರ್ಕಾರ ಬದಲಾಗುತ್ತದೆ ಎಂದು ಹೇಳಿದ್ದಾರೋ ಗೊತ್ತಿಲ್ಲ. ಅವರ ಅನುಭವದ ಮೂಸೆಯಿಂದಲೂ ಹೇಳಿರಬಹುದು. ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅವರ ಮಧ್ಯೆ ಏನು ನಡೆಯುತ್ತಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ, ಅಧಿಕಾರಕ್ಕಾಗಿ ಪೈಪೋಟಿ ಇರುವುದು ಸತ್ಯ ಎಂದರು. ಸಿದ್ದರಾಮಯ್ಯ ಅವರು ಈಗಾಗಲೇ ಮೂರು ಬಾರಿ ಇದೇ ಕೊನೆಯ ಚುನಾವಣೆ ಎಂದು ಹೇಳುತ್ತ ಬಂದಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿರಲಿ. ಆರೋಗ್ಯಕರ ಚುನಾವಣೆ ಅವರು ಎದುರಿಸಲಿ ಎಂದರು.
ಜಾಗೃತಿ ಅಗತ್ಯ: ಕೊಳವೆಬಾವಿಗೆ ಬಿದ್ದಿರುವ ಮಗು ಆರೋಗ್ಯದಿಂದ ಹೊರ ಬರಲಿ ಎಂದು ಪ್ರಾರ್ಥಿಸುವೆ. ಕೊಳವೆಬಾವಿ ಮುಚ್ಚುವ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.