

ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರಿಗೆ ಮೆದುಳು ಮತ್ತು ನಾಲಿಗೆಗೂ ಲಿಂಕ್ ಇಲ್ಲ. ಆತನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ ಸ್ವತಂತ್ರವಾಗಿ ಸ್ಪರ್ಧೆ ಮಾಡಿರುವುದರಿಂದ ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಈ ಬಾರಿ ಸ್ವಂತ ಶಕ್ತಿ ಮೇಲೆ 20 ಸೀಟು ಗೆಲ್ಲುತ್ತೇವೆ. ಅದರಲ್ಲಿ ಶಿವಮೊಗ್ಗ ಕೂಡ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲು ನಮ್ಮ ಅಭ್ಯಂತರವಿಲ್ಲ. ಆದರೆ ಪ್ರತಿಬಾರಿಯೂ ಕಾಂಗ್ರೆಸ್‌ನವರೇ ಯಾಕೆ ಟಾರ್ಗೆಟ್ ಆಗುತ್ತಾರೆ. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಶ್ರೀಮಂತರಲ್ಲವಾ?, ಅವರ ಮೇಲೆ ಏಕೆ ದಾಳಿ ನಡೆಯುತ್ತಿಲ್ಲ ಸಿದ್ದರಾಮಯ್ಯ ಪ್ರಶ್ನಿಸಿದರು.
ನಮ್ಮದು ಚೊಂಬು ಪಾಲಿಟಿಕ್ಸ್ ಅಲ್ಲ, ಕೇಂದ್ರದಿಂದ ತೆರಿಗೆ ಹಂಚಿಕೆ ಸಮರ್ಪಕವಾಗಿ ಆಗಿಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸಮಾಜವನ್ನು ಹೊಡೆದು ಆಳುತ್ತಿದೆ. ನಾವು ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ಹಾಗಾಗಿ ನಾವು ಡೇಂಜರ್ ಅಲ್ಲ. ಈ ದೇಶಕ್ಕೆ ಬಿಜೆಪಿ ಡೇಂಜರ್ ಎಂದರು.