ಬಾಗಲಕೋಟೆಯಲ್ಲಿ 20ರಂದು ಸಂತರ ಸಭೆ,  ಬ್ರಿಗೇಡ್ ಸ್ಥಾಪನೆ ಕುರಿತು ಅಂತಿಮ ತೀರ್ಮಾನ,   ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆ

IMG_20241007_130311_518-1.jpg
Published on

ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದುಳಿದವರು, ದಲಿತರ ಮೇಲೆ ಬಹಳಷ್ಟು ಅನ್ಯಾಯವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯಗಳು ಸಂಘಟನಾತ್ಮಕ ಶಕ್ತಿ ಹೊಂದಬೇಕಾಗಿದೆ, ಇದಕ್ಕಾಗಿ ಅ. 20ರಂದು ಬಾಗಲಕೋಟೆಯಲ್ಲಿ ಸಾಧು ಸಂತರ ಮಾರ್ಗದರ್ಶನದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಸೋಮವಾರ ಉತ್ತರ ಕರ್ನಾಟಕ ಭಾಗದ ಪಕ್ಷಾತೀತ ಮುಖಂಡರ ಪೂರ್ವಭಾವಿ ಸಭೆ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಮಾಜದಲ್ಲಿ ನೊಂದವರು, ಶೋಷಿತರು, ಬಡವರಿಗೆ ನ್ಯಾಯ ಒದಗಿಸುವ ಸಲುವಾಗಿ ರಾಣಿ ಚನ್ನಮ್ಮ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕೆ ನಾಡಿನ ಅನೇಕ ಮಠಾಧೀಶರು ಬೆನ್ನೆಲುಬಾಗಿ ನಿಂತಿದ್ದಾರೆ. ಜಾತ್ಯತಿತ, ಪಕ್ಷಾತಿತ ಮತ್ತು ರಾಜಕಿಯೇತರವಾಗಿ ಕೆಲಸ ನಿರ್ವಹಿಸುವ ಬ್ರಿಗೇಡ್ ಸಮಾಜ ವಿರೋಧಿ, ರಾಷ್ಟ್ರ ವಿರೋಧಿಗಳ ವಿರುದ್ಧ ಕಾರ್ಯ ಮಾಡಲಿದೆ. ಬ್ರಿಗೇಡ್ ಕುರಿತು ಬಾಗಲಕೋಟೆ ಸಭೆಯಲ್ಲಿ ಅಂತಿಮ ನಿರ್ಧಾರವೂ ಹೊರಬೀಳಲಿದೆ ಎಂದರು.

ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಹಾಲಿಂಗರಾಯ ಸ್ವಾಮೀಜಿಗಳು ಸೇರಿ 40ಕ್ಕೂ ಹೆಚ್ಚು ಮಠಾಧೀಶರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಲಿದ್ದಾರೆ. ನಾಡಿನ ವಿವಿಧೆಡೆಯಿಂದ 2 ಸಾವಿರಕ್ಕೂ ಹೆಚ್ಚು ವಿವಿಧ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಹಿಂದೆ ರಾಯಣ್ಣ ಬ್ರಿಗೇಡ್ ಸ್ಥಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಅಮಿತ್ ಶಾ ಮೂಲಕ ಈ ಸಂಘಟನೆ ಕೈಬಿಡುವಂತೆ ಒತ್ತಡ ತಂದಿದ್ದರು. ಅಂದು ಸಂಘಟನೆ ಕೈಬಿಟ್ಟು ತಪ್ಪು ಮಾಡಿದೆ ಎನಿಸುತ್ತಿದೆ. ಹಾಗಾಗಿ ಈ ಬಾರಿ ರಾಣಿ ಚನ್ನಮ್ಮ ರಾಯಣ್ಣ ಬ್ರಿಗೇಡ್ ಸ್ಥಾಪನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು.

ಸ್ವಜನ ಪಕ್ಷಪಾತ: ಬಿಜೆಪಿ ಶುದ್ಧೀಕರಣದ ಬಗ್ಗೆ ಮಾತನಾಡುವ ಈಶ್ವರಪ್ಪ, ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಯಡಿಯೂರಪ್ಪ ಅವರು ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರ ಬಗ್ಗೆ ಎರಡು ಮಾತಿಲ್ಲ. ಆದರೆ, ನಾವೆಲ್ಲ ಪಕ್ಷ ಸಂಘಟನೆ ಮಾಡುವಾಗ ವಿಜಯೇಂದ್ರ ಎಲ್ಲಿದ್ದರು? ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಪಕ್ಷ ಮತ್ತು ಅದರ ಶುದ್ಧೀಕರಣದ ಬಗ್ಗೆ ಮಾತನಾಡಲು ವಿಜಯೇಂದ್ರ ಎಳಸು ಎಂದರು. ಇವರಷ್ಟೇ ಲಿಂಗಾಯತ ಮುಖಂಡರು ಎಂದು ಪಕ್ಷದ ಹೈಕಮಾಂಡ್ ಭ್ರಮೆಯಲ್ಲಿದೆ. ವರಿಷ್ಠರ ಕಣ್ಣಿಗೆ ಮಣ್ಣೆರಚಿ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡಿರುವ ವಿಜಯೇಂದ್ರ, ನಾವು ಕಟ್ಟಿ ಬೆಳೆಸಿದ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅಪ್ಪ ಮಕ್ಕಳ ಹೊಂದಾಣಿಕೆ, ಸ್ವಜನ ಪಕ್ಷಪಾತದಿಂದ ಪಕ್ಷ ಮುಕ್ತವಾಗಲಿ ಎಂದು ಆಗ ಚುನಾವಣೆಗೆ ಸ್ಪಧಿರ್ಸಿದ್ದೆ. ನಾನು ಹಾಗೂ ನನ್ನ ಮಗ ಮತ್ತೆ ಚುನಾವಣೆಗೆ ಹೋಗುವುದಿಲ್ಲ. ಪಕ್ಷಕ್ಕೂ ಈ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಡಾ, ಡಿನೋಟಿಫಿಕೇಶನ್, ಪೋಕ್ಸೊ ಮುಂತಾದ ಹಗರಣಗಳಲ್ಲಿ ರಾಜಕಾರಣಿಗಳು ಸಿಲುಕಿದ್ದಾರೆ. ಅದರ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಇಡೀ ದೇಶ ಇದನ್ನು ನೋಡುತ್ತಿದೆ. ಈ ದಿಸೆಯಲ್ಲಿ ಯುವ ರಾಜಕಾರಣಿಗಳಿಗೆ ಮಾದರಿಯಾಗಲು ಸಂಘಟನೆ ಮಾಡಲಾಗುತ್ತಿದೆ. ಹುಲಿ ಎರಡು ಹೆಜ್ಜೆ ಹಿಂದೆ ಇಟ್ಟಿರಬಹುದು, ಆ ಮೇಲೆ ಎಗರುತ್ತದೆ ನೋಡಿ ಎಂದು ಈಶ್ವರಪ್ಪ ಗುಡುಗಿದರು.

ಸಿಎಂ ನುಡಿದಂತೆ ನಡೆಯಲಿ:
ಸಿದ್ದರಾಮಯ್ಯ ಅವರು ಮುಡಾ ಕೇಸ್ ಮೈಮೇಲೆ ಬಂದ ಮೇಲೆ ವಿಷಯಾಂತರ ಮಾಡಲು ಜಾತಿ ಗಣತಿ ಮುನ್ನೆಲೆಗೆ ತಂದಿದ್ದಾರೆ. ಈ ಮೊದಲು ಚರ್ಚೆ ಮಾಡಿದ ನಂತರವೇ ಜಾತಿ ಗಣತಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದಿದ್ದರು. ಜಾತಿ ಗಣತಿ ವಿಷಯದಲ್ಲಿ ಅವರು ನುಡಿದಂತೆ ನಡೆಯಬೇಕು ಎಂದು ಈಶ್ವರಪ್ಪ ಸಲಹೆ ನೀಡಿದರು. ಮುಡಾ ಕೇಸ್ ಡೈವರ್ಟ್ ಆಗಬಾರದು. ಮೋದಿ, ಅಮಿತ್ ಶಾ ಅವರು ಸಹ ಜಾತಿ ಗಣತಿ ಪರವಾಗಿದ್ದಾರೆ. ಜಾತಿ ಗಣತಿ ಹೆಸರಿನಲ್ಲಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಯತ್ನಿಸಬಾರದು ಎಂದರು.

ಮಾಜಿ ಸಂಸದ ಕೆ. ವೀರುಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ರಘುಪತಿ ಭಟ್ಟ, ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಅಹಿಂದ ನಾಯಕ ಮುಕುಡಪ್ಪ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ವಿನೋದ ಇಳಕಲ್ಲ, ಸಿದ್ದು ತೇಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net