

ಬೆಂಗಳೂರು: ಭೂಮಿಯ ಎರಡು ಕಣ್ಣುಗಳಂತಿರುವ ಪ್ರಕೃತಿ ಮತ್ತು ಪರಿಸರವನ್ನು ಸಂರಸುವ ಹೊಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಹಾಗೂ ಭಾರತ್ ಸ್ಕೌಟ್ಸ್ ಗೈಡ್ಸ್ ಸಹಯೋಗದೊಂದಿಗೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಪರಿಸರ ಶಿಕ್ಷಣ ಕಾರ್ಯಕ್ರಮದಡಿ ಬುಧವಾರ ಆಯೋಜಿಸಿದ್ದ 'ಪರಿಸರ-ವಸ್ತುಪ್ರದರ್ಶನ' ಉದ್ಘಾಟಿಸಿ ಮಾತನಾಡಿದರು.
ಜಗತ್ತು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಎದುರಿಸುತ್ತಿದೆ. ವೃ ಸಂರಣೆಯಿಂದ ಮಾತ್ರ ಈ ಸಮಸ್ಯೆ ನಿಯಂತ್ರಿಸಬಹುದು. ನಮ್ಮ ಪೂರ್ವಜರು ಜಗತ್ತಿನಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಮಿತವಾಗಿ ಬಳಸುವುದರೊಂದಿಗೆ, ಮುಂದಿನ ಪೀಳಿಗೆಗೆ ಉಳಿಸುತ್ತಿದ್ದರು. ಪರಿಸರ ಸಂಪತ್ತನ್ನು ಪೂಜಿಸುತ್ತಿದ್ದರು. ಬೆಟ್ಟದ ಮೇಲೆ ದೇವಾಲಯ ನಿರ್ಮಿಸಿ, ಆ ಗುಡ್ಡವನ್ನು ಯಾರೂ ನಾಶ ಮಾಡದಂತೆ ತಡೆದಿದ್ದರು ಎಂದು ಹೇಳಿದರು.
ಬೃಹತ್ ಯಂತ್ರಗಳನ್ನು ನಾವಿಂದು ಆವಿಷ್ಕರಿಸಿ, ಭೂಗರ್ಭವನ್ನೇ ಬಗೆಯುತ್ತಿದ್ದೇವೆ. ಪರಿಣಾಮ ಅರಣ್ಯ ಸಂಪತ್ತು ನಶಿಸುತ್ತಿದೆ. ಮಾಲಿನ್ಯದಿಂದ ಆಹಾರ, ಗಾಳಿ, ನೀರು ಕಲುಷಿತವಾಗುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಪರಿಸರ ರಣೆಗೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಪರಿಸರ ಪ್ರೇಮ ಮೂಡಿಸಬೇಕು. ಶಾಲೆ-ಕಾಲೇಜುಗಳಲ್ಲಿ ಶಿಕರು ಉಪನ್ಯಾಸಕರು ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಪತ್ರಕರ್ತ ನಾಗೇಶ್ ಹೆಗಡೆ, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ರಿಚರ್ಡ್ ಲೂಯಿಸ್ ಇತರರಿದ್ದರು.
ನೀರಿನಲ್ಲಿ ಕರಗದ ಮತ್ತು ಭಾರ ಲೋಹಯುಕ್ತ ರಾಸಾಯನಿಕ ಬಣ್ಣದಿಂದ ಕೂಡಿದ ಪಿಒಪಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಜೀವ ವೈವಿಧ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ಎಲ್ಲರೂ ಪರಿಸರಸ್ನೇಹಿ ಮಣ್ಣಿನ ಗಣಪತಿ ಪೂಜಿಸಿ.
-ಈಶ್ವರ ಖಂಡ್ರೆ, ಅರಣ್ಯ ಸಚಿವ