ಮುಚ್ಚಿದ ಎರ್ಮಾಳು ಶಾಲೆ, ದಾಖಲಾತಿಯಿಲ್ಲದೆ ನೇಪಥ್ಯಕ್ಕೆ ಸರಿದ ಪಪೂ ವಿಭಾಗ, ಅಡ್ಡಿಯಾದ ಶಿಕ್ಷಣ ಇಲಾಖೆ ಮಾನದಂಡ

yermal
ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿರುವ ಎರ್ಮಾಳು ಬಡಾ ಮೀನುಗಾರಿಕಾ ಜೂನಿಯರ್ ಕಾಲೇಜು ಹಾಗೂ ಪ್ರೌಢಶಾಲೆ
Published on

ಹೇಮನಾಥ್ ಪಡುಬಿದ್ರಿ

ಸಾವಿರಾರು ಮಂದಿಗೆ ವಿದ್ಯೆ ನೀಡಿದ ಎರ್ಮಾಳು ಬಡಾ ಮೀನುಗಾರಿಕಾ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿ ಮಕ್ಕಳ ದಾಖಲಾತಿಯಿಲ್ಲದೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಮುಚ್ಚಿದ್ದರೆ, ಪದವಿ ಪೂರ್ವ ವಿಭಾಗ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನೇಪಥ್ಯಕ್ಕೆ ಸರಿದಿದೆ.

1973ರಲ್ಲಿ ಅಂದಿನ ಮೈಸೂರು ಸರ್ಕಾರ ಅವಧಿಯಲ್ಲಿ ಪ್ರೌಢಶಾಲಾ ವಿಭಾಗ ತೆರೆಯಲಾಗಿತ್ತು. ವಿದ್ಯಾರ್ಥಿಗಳಿಂದ ತುಂಬಿದ್ದ ಶಾಲೆ ಉತ್ತಮ ಶಿಕ್ಷಣದಿಂದ ಅದೆಷ್ಟೋ ಪ್ರಜ್ಞಾವಂತರನ್ನು ಸಮಾಜಕ್ಕೆ ನೀಡಿತ್ತು. ಇಲ್ಲಿನ ಶೈಕ್ಷಣಿಕ ಬೇಡಿಕೆಯಂತೆ 1982ರಲ್ಲಿ ಅಂದಿನ ಕಾಪು ಶಾಸಕ ದಿ. ಬಿ.ಭಾಸ್ಕರ್ ಶೆಟ್ಟಿ ಕಾಲೇಜು ವಿಭಾಗ ಉದ್ಘಾಟಿಸಿದ್ದರು. ಆ ಬಳಿಕ ಶಾಸಕರಾಗಿದ್ದ ದಿ.ವಸಂತ ವಿ.ಸಾಲ್ಯಾನ್, ಲಾಲಾಜಿ ಆರ್.ಮೆಂಡನ್, ವಿನಯಕುಮಾರ್ ಸೊರಕೆ ಶಾಲೆ ಅಭಿವೃದ್ಧಿಗೆ ವಿಶೇಷ ಮುತವರ್ಜಿ ವಹಿಸಿದ್ದರು. ಈ ಶಾಲೆಯಲ್ಲಿ ತೊಡಗಿಸಿಕೊಂಡು ಮುಂಚೂಣಿಯಲ್ಲಿದ್ದರು.

ದಾಖಲಾತಿ ಇಳಿಕೆ

ಆಂಗ್ಲ ಮಾಧ್ಯಮ ಹಾಗೂ ಸುತ್ತಲಿನ ಖಾಸಗಿ ಶಾಲೆಗಳ ಪ್ರಭಾವದಿಂದ ವರ್ಷ ಕಳೆದಂತೆ ಇಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಇಳಿಕೆ ಕಂಡಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆಯಲ್ಲಿ 13 ವಿದ್ಯಾರ್ಥಿಗಳಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮಾನದಂಡದಂತೆ ತರಗತಿಗೆ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಅಲ್ಲಿನ ವಿದ್ಯಾರ್ಥಿಗಳನ್ನು ಹತ್ತಿರದ ಶಾಲೆಗಳಿಗೆ ಸೇರ್ಪಡೆ ಮಾಡಬೇಕಾದ ಮಾನದಂಡ ಸಂಸ್ಥೆ ಮುಂದುವರೆಯಲು ಅಡ್ಡಿಯಾಯಿತು.

ಕಳೆದ ವರ್ಷ ಇಲ್ಲಿ 8ನೇ ತರಗತಿಯಲ್ಲಿ 4 ವಿದ್ಯಾರ್ಥಿಗಳಿದ್ದು, ಅವರಲ್ಲಿ 2 ವಿದ್ಯಾರ್ಥಿಗಳಿಗೆ ಮೂಳೂರಿನ ಶಾಲೆಯೊಂದರಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾದರೆ ಉಳಿದಿಬ್ಬರು ಬೇರೆಡೆ ದಾಖಲಾತಿ ಪಡೆದರು. ಕರ್ತವ್ಯ ನಿರ್ವಹಿಸುತ್ತಿದ್ದ 4 ಜನ ಶಿಕ್ಷಕರನ್ನು ಇಲ್ಲಿಯೇ ಉಳಿಸಿಕೊಂಡು ಶಿಕ್ಷಕರ ಕೊರತೆಯಿರುವ ಶಾಲೆಗೆ ನಿಯೋಜನೆಗೆ ಅವಕಾಶ ಕಲ್ಪಿಸಿ, ಸಂಸ್ಥೆ ಮುಚ್ಚದೆ 3 ವರ್ಷ ಕಾದು ನೋಡುವ ತಂತ್ರವನ್ನು ಇಲಾಖೆ ಅನುಸರಿಸಿದರೂ ಪ್ರಸ್ತುತ ವರ್ಷವೂ ಇಲ್ಲಿ ವಿದ್ಯಾರ್ಥಿಗಳು ದಾಖಲಾಗಿಲ್ಲ. ಬೇರೆಡೆ ನಿಯೋಜನೆಗೊಂಡ ಶಿಕ್ಷಕರು ವಾರದಲ್ಲಿ ಒಂದು ದಿನ ಈ ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ದಾಖಲೆಪತ್ರ ನೀಡುವ ಕರ್ತವ್ಯಕ್ಕೂ ಹಾಜರಾಗುತ್ತಿದ್ದಾರೆ.

ಪದವಿ ಪೂರ್ವ ವಿಭಾಗ ಬಂದ್

ಪದವಿಪೂರ್ವ ವಿಭಾಗದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕೇವಲ ಕಲಾ ವಿಭಾಗ ಮಾತ್ರವಿದ್ದು, 7 ವಿದ್ಯಾರ್ಥಿಗಳಿದ್ದರು. ಪ್ರಥಮ ಪಿಯುಸಿಗೆ ಕೆಲ ವಿದ್ಯಾರ್ಥಿಗಳು ಬಂದರೂ ಮುಚ್ಚುವ ನೆಪದಲ್ಲಿ ದಾಖಲಾತಿ ನಡೆಸಿರಲಿಲ್ಲ. ಇಂಗ್ಲಿಷ್ ಭಾಷಾ ಉಪನ್ಯಾಸಕರ ಕೊರತೆ ನಡುವೆ 3 ನಿಯೋಜಿತ ಮತ್ತು ಇಬ್ಬರು ಅತಿಥಿ ಉಪನ್ಯಾಸಕರು ಶೈಕ್ಷಣಿಕ ವರ್ಷ ಪೂರ್ಣಗೊಳಿಸಿದ್ದಾರೆ. ಇದೀಗ ಸಂಸ್ಥೆ ಮುಚ್ಚಿದ್ದು, ಪಾಳುಬೀಳುವಂತಾಗಿದೆ.

ಮೂಲಸೌಕರ್ಯಕ್ಕೆ ಕೊರತೆಯಿಲ್ಲ

4 ಎಕರೆ ಪ್ರದೇಶದಲ್ಲಿ ಉತ್ತಮ ಪರಿಸರದಲ್ಲಿ ಸುಸಜ್ಜಿತ ಕಟ್ಟಡ, ಶಾಲಾ ಹೂದೋಟ, ಮೈದಾನ, ಹೊಸ ಕಟ್ಟಡಗಳ ನಿರ್ಮಾಣವಾಗಿದೆ. ಹಿಂದಿನ ಶಾಸಕರಾದ ಲಾಲಾಜಿ ಆರ್.ಮೆಂಡನ್ ಅವಧಿಯಲ್ಲಿ ಹೊಸದಾಗಿ ಕಾಲೇಜು ಕಟ್ಟಡ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲು ಕಾಮಗಾರಿ ಆರಂಭಿಸಲಾಗಿತ್ತು. ಈ ಕಟ್ಟಡವನ್ನು ಹಾಸ್ಟೆಲ್ ಆಗಿ ಪರಿವರ್ತಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿತ್ತು. ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬಹುದು ಎನ್ನುವ ಪ್ರಯತ್ನವೇನೋ ನಡೆದಿತ್ತು. ಆದರೆ ಕಾರಣಾಂತರಗಳಿಂದ ಗುತ್ತಿಗೆದಾರರು ಕಾಮಗಾರಿ ಅರ್ದಕ್ಕೆ ನಿಲ್ಲಿಸಿದ್ದು, ಆ ಭರವಸೆಯೂ ಈಗ ಹುಸಿಯಾಗಿದೆ. ಕಟ್ಟಡವು ಪಾಳುಬಿದ್ದಿದೆ.

ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯ ಆಗಿರುವುದರಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇಲಾಖೆ ಮಾನದಂಡಂತೆ ತರಗತಿಗೆ ಅಗತ್ಯ ವಿದ್ಯಾರ್ಥಿಗಳ ದಾಖಲಾತಿ ಆದಲ್ಲಿ ಮತ್ತೆ ತೆರೆಯಲಾಗುವುದು. ಇಲಾಖೆಗೂ ಸಂಸ್ಥೆ ಉಳಿಯಬೇಕೆನ್ನುವ ಒತ್ತಾಸೆಯಿದೆ. ಇಲ್ಲಿರುವ 4 ಶಿಕ್ಷಕರಲ್ಲಿ 2 ಜನರನ್ನು ಪಡುಬಿದ್ರಿ ಕೆಪಿಎಸ್, ಓರ್ವರನ್ನು ಪಲಿಮಾರು ಪ್ರೌಢಶಾಲೆ ಹಾಗೂ ಇನ್ನೊಬ್ಬರನ್ನು ಶಿಕ್ಷಕರ ಕೊರತೆಯಿರುವ ಶಾಲೆಗೆ ನಿಯೋಜಿಸಲಾಗಿದೆ.-ಎಲ್ಲಮ್ಮ, ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ

ಕಳೆದ ಶೈಕ್ಷಣಿಕ ವರ್ಷದಲ್ಲಿಯೇ ಪ್ರಥಮ ಪಿಯುಗೆ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ. ದ್ವಿತೀಯ ಪಿಯುನಲ್ಲಿದ್ದ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೋಗಿದ್ದು, ಅಲ್ಲಿದ್ದ ಉಪನ್ಯಾಸಕರು ಬೇರೆಡೆ ವರ್ಗಾವಣೆ ಪಡೆದಿದ್ದಾರೆ. ವಾಣಿಜ್ಯ ಮತ್ತು ಕಲಾ ವಿಭಾಗವನ್ನೊಂದಿದ್ದ ಕಾಲೇಜಿನಲ್ಲಿ ಮಕ್ಕಳ ದಾಖಲಾತಿ ಚೇತರಿಕೆ ಕಾಣದೆ ಮುಚ್ಚುವ ಪರಿಸ್ಥಿತಿ ಬಂದಿದೆ.-ಮಾರುತಿ, ಡಿಡಿಪಿಯು ಉಡುಪಿ

ಈ ಶಾಲೆ ನೂರು ಮೀಟರ್ ದೂರದಲ್ಲಿ ಇತ್ತೀಚಿನ ವರ್ಷಗಳಲ್ಲಷ್ಟೇ ತೆರೆದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಿದ್ದು, ಇಲ್ಲಿಯೇ ಪದವಿ ಪೂರ್ವ ವಿಭಾಗ ತೆರೆಯುವ ಪ್ರಯತ್ನಗಳು ಸಾಗಿವೆ. ಸಾವಿರಾರು ವಿದ್ಯಾರ್ಥಿಗಳು ಜ್ಞಾನರ್ಜನೆ ಮಾಡಿದ ಸಂಸ್ಥೆ ಮುಚ್ಚಿರುವುದು ಬೇಸರ ತಂದಿದೆ. ಸಕಲ ಸೌಲಭ್ಯಗಳಿರುವ ಈ ಸಂಸ್ಥೆ ಉಳಿಸುವಲ್ಲಿ ಊರವರು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಮುಂದಾಗಬೇಕು.-ಹೇಮಚಂದ್ರ, ಹಳೇ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net