

ಚಿಕ್ಕಬಳ್ಳಾಪುರ: ಮಣ್ಣಿನಲ್ಲಿ ರೂಪುಗೊಂಡಿರುವ ನೇತಾಜಿ ಸುಭಾಷ್ ಚಂದ್ರಬೋಸ್, ಪವಡಿಸಿರುವ ರಂಗಸ್ಥಳದ ರಂಗನಾಥ ಸ್ವಾಮಿ, ಬಗೆಬಗೆಯ ಬಣ್ಣದ ಗುಲಾಬಿ ಹೂವುಗಳಿಂದ ತಯಾರಿಸಿದ ಹಂಪಿಯ ಕಲ್ಲಿನ ರಥ, ಬಾಯಲ್ಲಿ ನೀರೂರಿಸುವ ತಿಂಡಿ ತಿನಿಸುಗಳು, ಗಮನ ಸೆಳೆಯುವ ಅಲಂಕಾರಿಕ ವಸ್ತುಗಳು, ನಗರ ಪ್ರದೇಶದಲ್ಲಿ ಗ್ರಾಮೀಣ ಸೊಗಡಿನ ವಾತಾವರಣ, ಎಲ್ಲೆಡೆ ತುಂಬಿ ತುಳುಕಾಡುತ್ತಿದ್ದ ಜನ...
ಇವು ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟವು ಆಯೋಜಿಸಿರುವ ಕೃಷಿ ಮೇಳದ ಮೊದಲ ದಿನ ಶನಿವಾರ ಕಂಡು ಬಂದ ದೃಶ್ಯ.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಮೀನುಗಾರಿಕೆ ಸೇರಿ ವಿವಿಧ ಇಲಾಖೆಗಳ ಸವಲತ್ತು, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ರಾಸು ಮತ್ತು ಮೀನುಗಳ ಪ್ರದರ್ಶನ, ನರೇಗಾ ಮಾದರಿ ಗ್ರಾಮ, ಹನಿ ನೀರಾವರಿ ಪದ್ಧತಿ ಮಹತ್ವ, ಸಾಂಪ್ರದಾಯಿಕ ಕೃಷಿ ಉಪಕರಣಗಳ ಪ್ರದರ್ಶನ, ವಿವಿಧ ಉತ್ಪನ್ನಗಳು, ಮತ್ತೊಂದೆಡೆ ಮಹಿಳೆಯರಿಗೆ ರಂಗೋಲಿ, ಸಿರಿಧಾನ್ಯಗಳ ಅಡುಗೆ ತಯಾರಿ, ಶ್ವಾನಗಳ ಸ್ಪರ್ಧೆ, ರೈತರಿಗೆ ಮೂಟೆ ಹೊರುವ ಮತ್ತು ಮುದ್ದೆ ತಿನ್ನುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಚಿತ್ರಕಲೆ, ಜಾನಪದ ನೃತ್ಯ, ರೈತ ದಂಪತಿಯ ಫ್ಯಾಷನ್ ಶೋ ಸೇರಿ ವಿವಿಧ ಕಾರ್ಯಕ್ರಮಗಳನ್ನೊಳಗೊಂಡಿದ್ದ ಕೃಷಿ ಮೇಳವು ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.
ಹಲವರು ಮಾಹಿತಿ ಪಡೆದುಕೊಂಡಿದ್ದರ ಜತೆಗೆ ಸೆಲ್ಫಿಗಳನ್ನು ತೆಗೆದುಕೊಂಡು ಖುಷಿಪಟ್ಟರು. ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸಿಇಒ ಬಿ ಫೌಜೀಯಾ ತರನ್ನುಮ್, ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್ ಮತ್ತಿತರರು ಇದ್ದರು.
ದೂರ ಉಳಿದ ಜಿಲ್ಲೆಯ ಶಾಸಕರು: ಜನಪ್ರತಿನಿಧಿಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯವು ಜಿಲ್ಲಾಮಟ್ಟದ ಕೃಷಿ ಮೇಳದಲ್ಲಿ ಕಂಡು ಬಂತು. ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಎಸ್.ಎನ್.ಸುಬ್ಬಾರೆಡ್ಡಿ, ಎಂ.ಕೃಷ್ಣಾರೆಡ್ಡಿ ಗೈರಾಗಿದ್ದರು. ಜಿಲ್ಲೆಯ ಐವರು ಶಾಸಕರು ಮೊದಲಿನಿಂದಲೂ ಸಚಿವ ಡಾ ಕೆ.ಸುಧಾಕರ್ ಅವರೊಂದಿಗೆ ರಾಜಕೀಯ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುತ್ತಿದ್ದು, ಇದು ಕೃಷಿ ಮೇಳವನ್ನೂ ಬಿಡಲಿಲ್ಲ. ಜಿಪಂ ಅಧ್ಯಕ್ಷರು ಅಧಿಕಾರಿಗಳ ಮೂಲಕ ಖುದ್ದಾಗಿ ಆಹ್ವಾನಿಸಿದ್ದರೂ ಶಾಸಕರು ಕಾರ್ಯಕ್ರಮಕ್ಕೆ ಬರಲಿಲ್ಲ. ಇದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸುವುದರ ಜತೆಗೆ ಗೈರಾದವರಿಗೆ ಬಹಿರಂಗವಾಗಿಯೇ ಟಾಂಗ್ ನೀಡಿದರು. ರೈತರಲ್ಲಿ ಶಕ್ತಿ ತುಂಬುವ ಕಾರ್ಯಕ್ರಮಕ್ಕೆ ಶಾಸಕರು ಆಗಮಿಸದಿರುವುದು ದುರದೃಷ್ಟಕರ. ಜನಪ್ರತಿನಿಧಿಗಳು ಜನರ ಹಿತದೃಷ್ಟಿಯಿಂದ ಭಿನ್ನಾಭಿಪ್ರಾಯ ಮರೆಯಬೇಕು. ಮುಂಬರುವ ದಿನಗಳಲ್ಲಾದರೂ ಜಿಲ್ಲೆಯ ಶಾಸಕರ ಧೋರಣೆ ಬದಲಾಗಲಿ ಎಂದು ತಿಳಿಸಿದರು.
ವೇದಿಕೆ ಎದುರು ಪ್ರಹಸನ: ಕೃಷಿ ಮೇಳಕ್ಕೆ ರೈತ ಸಂಘಟನೆಯ ಒಂದು ಬಣಕ್ಕೆ ಮಣೆ ಹಾಕಲಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸುವಲ್ಲಿ ಪಕ್ಷಪಾತ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ರೈತರು ವೇದಿಕೆ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಗೊಂದಲ ಉಂಟಾಯಿತು. ಕೊನೆಗೆ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ರೈತರನ್ನು ಸಮಾಧಾನಪಡಿಸಿ, ವೇದಿಕೆಗೆ ಸ್ವಾಗತಿಸಿದರು.
ರೈತರಿಗೆ ಸನ್ಮಾನ: ರೈತರಾದ ಬಾಗೇಪಲ್ಲಿಯ ನಾರಾಯಣಸ್ವಾಮಿ, ರವೀಂದ್ರ ನಾಥ್‌ರೆಡ್ಡಿ, ಚಿಂತಾಮಣಿಯ ಎಂ.ಭೈರೇಶ್, ಲಕ್ಷ್ಮಣ್, ಶಿಡ್ಲಘಟ್ಟದ ಕಮಲಮ್ಮ, ನವೀನ್‌ಕುಮಾರ್, ಗುಡಿಬಂಡೆಯ ವಿ.ಕಸ್ತೂರಿ, ಗೌರಿಬಿದನೂರಿನ ಜಿ.ಬೋಮಣ್ಣ ಅವರನ್ನು ಸನ್ಮಾನಿಸಲಾಯಿತು.
ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ನೀರಾವರಿ ಯೋಜನೆಯ ಪ್ರಗತಿಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನೊಳಗೊಂಡ ಸಭೆ ಕರೆದು ಚರ್ಚಿಸಲಿದ್ದು ತ್ವರಿತ ಅನುಷ್ಠಾನಕ್ಕೆ ಸರ್ಕಾರದ ಗಮನ ಸೆಳೆಯಲಾಗುವುದು. -ಬಿ.ಎನ್.ಬಚ್ಚೇಗೌಡ, ಸಂಸದ ರಾಜ್ಯ ಸರ್ಕಾರದ ಪ್ರಮುಖ ಆದ್ಯತೆ ಎತ್ತಿನಹೊಳೆ ಯೋಜನೆ ಅನುಷ್ಠಾನ. ಇದರ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅಗತ್ಯ ನೆರವು ಒದಗಿಸುವ ವಿಶ್ವಾಸವಿದೆ. -ಡಾ ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಜಿಲ್ಲಾದ್ಯಂತ ಗಂಭೀರ ಸಮಸ್ಯೆ ಇದ್ದರೂ ಕೇವಲ ನಾಲ್ಕು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿರುವುದು ಸರಿಯಲ್ಲ. ಎಲ್ಲ ತಾಲೂಕುಗಳನ್ನು ಸೇರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. -ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಅಧ್ಯಕ್ಷ