

ನಂಜನಗೂಡು: ಅಕ್ಷರ ಕ್ರಾಂತಿಯಿಂದ ಮಾತ್ರ ಅಸ್ಪಶ್ಯತೆ ನಿವಾರಣೆ ಸಾಧ್ಯ ಎಂದು ಸಾಹಿತಿ ಹಾಗೂ ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಮೈಸೂರು, ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೆಎಸ್‌ಎಚ್‌ಜಿಆರ್‌ಡಿಒ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಸ್ಪಶ್ಯತೆ ನಿವಾರಣೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸ್ಪಶ್ಯತೆ ಹಿಂದಿಗಿಂತಲೂ ಈಗ ಕಡಿಮೆಯಾಗಿದೆ. ಆದರೆ ಸಂಪೂರ್ಣ ನಿವಾರಣೆಯಾಗಿಲ್ಲ. ಸಾಮಾಜಿಕ ಬದಲಾವಣೆ ಮೂಲಕ ಈ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು. ಪ್ರಸ್ತುತ ಜಾತಿ ವ್ಯವಸ್ಥೆ ಜೀವಂತವಾಗಿರುವುದಕ್ಕೆ ವಿದ್ಯಾವಂತ ಸಮಾಜವೇ ಪ್ರಮುಖ ಕಾರಣವಾಗಿದೆ. ಸಮಾಜದ ಎಲ್ಲ ವರ್ಗ ಶಿಕ್ಷಣದಿಂದ ಅರಿವು ತಂದುಕೊಂಡರೆ ಸಮಾನತೆಯ ಸಮಾಜ ಸ್ಥಾಪಿಸುವ ಜತೆಗೆ ಅಸ್ಪಶ್ಯತೆ ತೊಲಗಿಸಬಹುದು ಎಂದರು.
ಜಾತಿ, ಧರ್ಮ, ಕುಲ, ಗೋತ್ರಗಳು ನಮ್ಮೊಳಗೆ ಜೀವಂತವಾಗಿವೆ. ಬಹಿರಂಗದ ಒತ್ತಡದಿಂದಾಗಿ ಅಂತರಂಗ ಇನ್ನು ಕತ್ತಲಲ್ಲೇ ಇದೆ. ಆಹಾರ ಪದ್ಧತಿಯಿಂದ ಜಾತಿ ಗುರುತಿಸುವ ಪ್ರವೃತ್ತಿ ನಡೆಯುತ್ತಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರನ್ನು ಈ ದೇಶದ ಪ್ರತಿಯೊಬ್ಬ ಮಹಿಳೆಯೂ ನೆನೆಯಬೇಕು. ಮಹಿಳೆಯರ ಪರವಾಗಿ ಮೊಟ್ಟಮೊದಲು ಧ್ವನಿಯಾಗಿದ್ದು ಡಾ.ಅಂಬೇಡ್ಕರ್. ಈ ಹಿನ್ನೆಲೆಯಲ್ಲಿ ಪ್ರತಿ ಹೆಣ್ಣು ಮಕ್ಕಳು ಡಾ. ಅಂಬೇಡ್ಕರ್ ಅವರ ಕುರಿತು ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.
ಜಾತಿ ಪದ್ಧತಿ ವಿರುದ್ಧ 12ನೇ ಶತಮಾನದಲ್ಲಿ ಬಸವಣ್ಣ ಕ್ರಾಂತಿ ಮಾಡಿ ಮಹಿಳೆಯರಿಗೂ ಸಮಾನತೆ ನೀಡಬೇಕು ಎಂದಿದ್ದರು. ಆದರೆ ಇಂದಿಗೂ ಅಂಗನವಾಡಿಗಳಲ್ಲಿ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಊಟ ಬಡಿಸುವ ವಿಚಾರದಲ್ಲಿ ಸಹ ಅಸ್ಪಶ್ಯತೆ ಆಚರಣೆ ಇರುವುದು ಈ ದೇಶದ ದುರಂತ. ಇನ್ನೂ ಕೂಡ ಕೆಲವು ಗ್ರಾಮಗಳಲ್ಲಿ ದೇವಾಲಯಕ್ಕೆ ಪ್ರವೇಶವಿಲ್ಲ, ರಥೋತ್ಸವ ಸಂದರ್ಭದಲ್ಲಿ ದಲಿತರು ಭಾಗವಹಿಸುತ್ತಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಜಾಗತಿಕವಾಗಿ ಮುಂದುವರಿದಿದ್ದರೂ ಜಾತಿ ವ್ಯವಸ್ಥೆ ತೊಲಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿದ್ದಲಿಂಗು ವಹಿಸಿದ್ದರು. ಪತ್ರಕರ್ತ ಸಿ.ಹರಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕೆ.ಎಸ್ ಭವ್ಯಶ್ರೀ, ಬಿ.ಮಂಜುಳಾ, ಆರೋಗ್ಯಾಧಿಕಾರಿ ಡಾ.ಬಿ.ಕೆ.ಈಶ್ವರ್ , ಕೆಎಸ್‌ಎಚ್ ಜಿಆರ್‌ಡಿಒ ಸಂಸ್ಥೆ ಅಧ್ಯಕ್ಷ ಗುರುಲಿಂಗಯ್ಯ, ಕಾರ್ಯನಿರ್ವಹಣಾಧಿಕಾರಿ ಕೆ.ಎನ್ ಕೋದಂಡರಾಮಯ್ಯ ಇತರರಿದ್ದರು.