ಶಿಕ್ಷಣ, ಸಂಘಟನೆಯಿಂದ ಜಾತಿ ಪದ್ಧತಿ ನಿರ್ಮೂಲನೆ

h24-samagara
Published on

ಹುಬ್ಬಳ್ಳಿ: ಜಾತಿ ಪದ್ಧತಿ ನಿರ್ಮೂಲನೆ ಇಂದಿಗೂ ಸಾಧ್ಯವಾಗಿಲ್ಲ. ಶಿಕ್ಷಣ ಹಾಗೂ ಸಂಘಟನೆಯಿಂದ ಮಾತ್ರ ನಿಮೂಲನೆ ಸಾಧ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶ್ರೀ ಸಂತ ರವಿದಾಸರು ಹಾಗೂ ಮಹಾಶರಣ ಸಮಗಾರ ಶ್ರೀ ಹರಳಯ್ಯ ಜಯಂತ್ಯುತ್ಸವ ನಿಮಿತ್ತ ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ, ಸಮಗಾರ (ಚಮ್ಮಾರ) ಶ್ರೀ ಹರಳಯ್ಯ ಸಮಾಜ ಅಭಿವೃದ್ಧಿ ಮಹಾಮಂಡಳದ ವತಿಯಿಂದ ದೇಶಪಾಂಡೆ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸದಸ್ಯತ್ವ ಅಭಿಯಾನ ಹಾಗೂ ರಾಜ್ಯ ಪದಾಧಿಕಾರಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶರಣ ಹರಳಯ್ಯನವರು ನಡೆದುಕೊಂಡ ರೀತಿ ನಮಗೆಲ್ಲ ಮಾದರಿ. ಅವರಿಂದಲೇ ಕಲ್ಯಾಣ ಕ್ರಾಂತಿ ಆಯಿತು. ಇದು ದೈವ ಸಂಕಲ್ಪವೂ ಹೌದು ಎಂದರು.

ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಸಮಗಾರ ಸಮಾಜದವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಉದ್ಯೋಗ ಪಡೆಯಬೇಕು. ಅಲ್ಲದೇ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಶರಣ ಹರಳಯ್ಯನವರು ಕಾಯಕದ ಜತೆಗೆ ಧರ್ಮದ ಕೆಲಸ ಮಾಡಿದರು. ಕಾಯಕ ತತ್ವವನ್ನು ಅವರು ಇತರರಿಗೂ ಹಂಚಿದರು. ಇಂಥ ಸಮಾಜದ ಜತೆಗೆ ನಾವು ಇದ್ದೇವೆ. ನಿಮ್ಮ ಸಮಸ್ಯೆಗೆ ಸದಾ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.

ಸಮಾಜದ ಅಧ್ಯಕ್ಷ ಜಗದೀಶ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಮಗಾರ ಹರಳಯ್ಯ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರಶುರಾಮ ಅರಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಎಂ.ಆರ್. ಪಾಟೀಲ, ಗುರುನಾಥ ಉಳ್ಳಿಕಾಶಿ, ಯಲ್ಲಪ್ಪ ಬೆಂಡಿಗೇರಿ, ಮಹಾದೇವ ಕಬಾಡೆ, ಭೀಮರಾಯಪ್ಪ ಕಟ್ಟಿಮನಿ, ಸುನೀಲಕುಮಾರ ಮದನಬಾವಿ, ದೀಪಕ ಕುಡಕಾರ, ರಮೇಶ ವತನ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net