

ಅಳವಂಡಿ: ಕಾನೂನು ಮನುಷ್ಯರ ಅಭಿವೃದ್ಧಿಗಾಗಿ ಇದೆ. ಹಾಗಾಗಿ ಎಲ್ಲರೂ ಕಾನೂನು ವ್ಯವಸ್ಥೆಯನ್ನು ಅನುಸರಿಸಬೇಕು. ದೇವದಾಸಿ ಪದ್ಧತಿ ನಿರ್ಮೂಲನೆ ಆಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ್ ಹೇಳಿದರು.
ಇದನ್ನೂ ಓದಿ:ಪರಿವರ್ತನೆಯತ್ತ ಗಣರಾಜ್ಯದ ಕಾನೂನು
ಸಮೀಪದ ಕವಲೂರಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ, ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಮುಕ್ತ ದೇವದಾಸಿಯರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನಿಷ್ಟ ಪದ್ಧತಿಗೆ ಕಾರಣ ಅನಕ್ಷರತೆ ಆದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಿ. ಶಿಕ್ಷಣದಿಂದ ಅಧಿಕಾರ, ಆಸ್ತಿ, ಗೌರವ ದೊರೆಯುತ್ತದೆ. ವಿಮುಕ್ತ ದೇವದಾಸಿಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಂವಿಧಾನ, ಕಾನೂನನ್ನು ಗೌರವಿಸಿ. ಅನಿಷ್ಟ ಪದ್ದತಿ ದೂರಮಾಡಿ ಎಂದರು.
ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಪೂರ್ಣಿಮಾ ಏಳಭಾವಿ ಮಾತನಾಡಿ, ದೇವದಾಸಿ ಪದ್ಧತಿಯಿಂದ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 6018, ಕೊಪ್ಪಳ ತಾಲೂಕಿನಲ್ಲಿ 2000 ವಿಮುಕ್ತ ದೇವದಾಸಿಯರಿದ್ದಾರೆ ಎಂದು ತಿಳಿದರು.
ಎಎಸ್‌ಐ ಶಶಿಕಾಂತ ರಾಠೋಡ್ ಮಾತನಾಡಿ, ಸಹಾಯವಾಣಿ, ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿದರು. ಎಸಿಡಿಪಿಒ ರೂಪಾ ಗಂಧದ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಗಳ ಬಗ್ಗೆ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಿಸರಳ್ಳಿ, ಉಪಾಧ್ಯಕ್ಷೆ ಅನ್ನಪೂರ್ಣಾ ಪೂಜಾರ, ಎಎಸ್‌ಐ ಶಶಿಕಾಂತ ರಾಠೋಡ್, ಪಿಡಿಒ ಅನಿತಾ ಕಿಲ್ಲೇದ, ವಕೀಲ ರವಿಚಂದ್ರ ಮಾಟಲದಿನ್ನಿ, ಸಖಿ ಒನ್ ಸೆಂಟರ್‌ನ ಆಡಳಿತಾಧಿಕಾರಿ ಯಮುನಾ ಬೆಸ್ತರ್, ದೇವದಾಸಿ ಪುನರ್ವಸತಿ ಯೋಜನೆ ತಾಲೂಕು ಅನುಷ್ಠಾನ ಅಧಿಕಾರಿ ದಾದೇಸಾಬ ಹಿರೇಮನಿ, ಪ್ರಮುಖರಾದ ರಣದಪ್ಪ ಸುಂಕಣ್ಣವರ, ಈರಪ್ಪ ತೆಳಗಡೆ ಇದ್ದರು.