

ಮುದ್ದೇಬಿಹಾಳ: ಆರ್ಥಿಕ ಶಿಸ್ತು ಇಲ್ಲದಿದ್ದಲ್ಲಿ ಸಹಕಾರಿ ಸಂಸ್ಥೆಗಳು ಮುಂದುವರೆಯಲು ಸಾಧ್ಯವಾಗುವುದಿಲ್ಲ. ದೇಶದಲ್ಲಿ ತಲಾ ಆದಾಯ ಹೆಚ್ಚಳ ಆಗಿದೆ ಎನ್ನುತ್ತಾರೆ. ಆದರೆ ಅದು ಎಷ್ಟು ಜನಕ್ಕೆ ಹಂಚಿಕೆಯಾಗಿದೆ. ಆರ್ಥಿಕತೆ ಬೆಳವಣಿಗೆ ಆದರೂ ಸಮಾನ ರೀತಿಯಲ್ಲಿ ಹಂಚಿಕೆ ಆಗಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ವೀರಶೈವ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಿಂದ ಹಮ್ಮಿಕೊಂಡಿದ್ದ ಸಹಕಾರ ಸಂಘಗಳ ಸಿಇಒಗಳಿಗೆ ಒಂದು ದಿನದ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಾಲ ಕೊಡಬೇಕು. ಒಮ್ಮೊಮ್ಮೆ ಅವರಿಂದ ಕಟಬಾಕಿ ಆದರೂ ಬ್ಯಾಂಕುಗಳು ಹೆಚ್ಚು ಒತ್ತಡ ಹಾಕಬಾರದು.ಬ್ಯಾಂಕುಗಳನ್ನು ಸಿರಿವಂತರೇ ಬಳಕೆ ಮಾಡುತ್ತಲೇ ಹೋದರೆ ಸಾಮಾಜಿಕ ಅರ್ಥಿಕ ಸಮಾನತೆ ಬೆಳವಣಿಗೆ ಆಗುವುದಿಲ್ಲ. ಬಡವರಿಗೆ ಸಾಲ ಸಿಗಬೇಕು ಎಂಬ ಉದ್ದೇಶದಿಂದ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು ಎಂದರು.
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ಎನ್‌ಪಿಎದಲ್ಲಿ ಉಳಿದ ಸಾಲಗಳನ್ನು ವಸೂಲಿ ಮಾಡುವ ಕಾರ್ಯವನ್ನು ಒಕ್ಕೂಟ ಮಾಡುತ್ತಿದೆ. ಸಾಲ ಕೊಡುವಾಗ ನೋಡಿ ಕೊಡಬೇಕು. ಸಾಲಗಾರನ ಹಿನ್ನೆಲೆ ಯೋಚಿಸಿ ಸಾಲ ಕೊಡಬೇಕು. ಸಾಲ ಪಡೆದ ನಂತರ ಸಾಲಗಾರನಿಗೆ ಬ್ಯಾಂಕಿನ ಭಯವೇ ಇರುವುದಿಲ್ಲ. ಸಾರ್ವಜನಿಕರ ಹಣ ಸದ್ಭಳಕೆ ಆಗಬೇಕೆಂದರೆ ಸಹಕಾರ ಸಂಸ್ಥೆಗಳಲ್ಲಿ ಪ್ರಾಮಾಣಿಕವಾಗಿ ಸಾರ್ವಜನಿಕರ ಹಣ ಕಾಯಬೇಕು ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಗುರುಶಾಂತ ನಿಡೋಣಿ ಮಾತನಾಡಿ, 2009ರಲ್ಲಿ ಈ ಸಂಘ ಹುಟ್ಟು ಹಾಕಿದ್ದೇವೆ. ವಸೂಲಾತಿ ಪ್ರಕ್ರಿಯೆ ಹಾನಿಗೊಳಗಾದ ಸೊಸೈಟಿಗಳ ಪುನರುಜ್ಜೀವನಕ್ಕೆ ಒಕ್ಕೂಟ ಶ್ರಮಿಸುತ್ತಿದೆ ಎಂದರು. ಕರ್ನಾಟಕ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಶ್ರೀಶರಣವೀರೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎಸ್. ಪಾಟೀಲ, ಜಿಲ್ಲಾ ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕ ಪಿ.ಬಿ. ಕಾಳಗಿ, ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೀರಣ್ಣ ತಡಸದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ, ವೀರಶೈವ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ವಿ.ಎಸ್. ನಾವದಗಿ, ಒಕ್ಕೂಟದ ಉಪಾಧ್ಯಕ್ಷ ಶ್ರೀಮಂತ ಇಂಡಿ, ದೀಪಕ ಶಿಂತ್ರೆ ಇದ್ದರು.
ಸಂಜೀವ ಡೊಳ್ಳಿ ಪ್ರಾರ್ಥಿಸಿದರು. ಬಸವರಾಜ ಸಾಹುಕಾರ ಸ್ವಾಗತಿಸಿದರು. ಎಸ್.ಆರ್. ಸಜ್ಜನ ನಿರೂಪಿಸಿದರು. ಶಾಸಕ ನಾಡಗೌಡರನ್ನು ವೀರಶೈವ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಸನ್ಮಾನಿಸಿದರು.
ಕಾರ್ಯಾಗಾರ: ಗುಣಾತ್ಮಕ ಸಾಲ ನೀಡಿ, ಪಂಚಾಯತ್ ಪ್ರಕರಣಗಳನ್ನು ದಾಖಲಿಸುವುದು ಹಾಗೂ ಅಮಲ ಬಜಾವಣೆ ಕ್ರಮಗಳ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಆರ್. ಬಟಕುರ್ಕಿ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಕುರಿತು ವಿಜಯಪುರದ ಲೆಕ್ಕ ಪರಿಶೋಧಕ ಸುಭಾಷ ಇಂಡಿ ಉಪನ್ಯಾಸ ನೀಡಿದರು.