

ಅಳವಂಡಿ: ವಿದ್ಯಾರ್ಥಿಗಳು ಹತ್ತಾರು ಕನಸುಗಳನ್ನು ಕಟ್ಟಿಕೊಂಡು ಪರಿಶ್ರಮದ ಓದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಸಾಧನೆಯತ್ತ ಕೊಂಡೊಯ್ಯುತ್ತದೆ ಎಂದು ಮುಂಡರಗಿಯ ಕ.ರಾ.ಬೆಲ್ಲದ ಪದವಿ ಕಾಲೇಜಿನ ಪ್ರಾಚಾರ್ಯ ಡಿ.ಜಿ.ಮಠದ ತಿಳಿಸಿದರು.
ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಪ್ರೌಢ-ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ದೈನಂದಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭ ಉದ್ದೇಶಿಸಿ ಸೋಮವಾರ ಮಾತನಾಡಿದರು. ಜೀವನದಲ್ಲಿ ಎಂದಿಗೂ ನಿರಾಶರಾಗಬೇಡಿ. ದೊಡ್ಡಮಟ್ಟದ ಕನಸು ಕಾಣಿ. ಆಸಕ್ತಿಗೆ ತಕ್ಕ ವಿಷಯವನ್ನು ಅಭ್ಯಾಸ ಮಾಡಿ. ನಾವು ದುರ್ಬಲರು, ಗ್ರಾಮೀಣ ಭಾಗದವರು ಎಂಬ ಕೀಳರಿಮೆ ಬೇಡ ಎಂದರು.
ಕಾರ್ಯಕ್ರಮದಲ್ಲಿ ಕಳೆದ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ರ‌್ಯಾಂಕ್ ಪಡೆದ ಅಮಿತಾ ಕಾತರಕಿ, ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಮಧು ಬೀಳಗಿ ಅವರನ್ನು ಗೌರವಿಸಲಾಯಿತು.
ಪ್ರಮುಖರಾದ ಬುಜಂಗಸ್ವಾಮಿ ಇನಾಮದಾರ, ವಿಜಯಲಕ್ಷ್ಮೀ ಇನಾಮದಾರ, ಪ್ರಕಾಶಸ್ವಾಮಿ ಇನಾಮದಾರ, ಡಿ.ಜಿ. ಲಕ್ಕನಗೌಡರ, ಎ.ಟಿ.ಕಲ್ಮಠ, ಸೂರ್ಯಕಾಂತ ಮಾಲಿಪಾಟೀಲ, ಚಂದ್ರಶೇಖರ ದೊಡ್ಡಮನಿ, ವಿ.ಎಚ್.ಪುಲೇಶಿ, ವಿಜಯಾನಂದ ಬಂಡಿ, ಸಿದ್ದು ಅಂಗಡಿ, ಹನುಮಂತ ಲಮಾಣಿ, ಎಚ್. ಮಹಾನಂದಿ, ನವೀನ ಇನಾಮದಾರ, ವಾಸವಾಂಬೆ, ಸಂಪಕ್ಕ, ಅಂಬರೀಶ ಇತರರಿದ್ದರು.