ಫಿಜಿಯೋಥೆರಪಿ ಕೇಂದ್ರಕ್ಕೆ ಸಲಕರಣೆ ಹಸ್ತಾಂತರ

HUN-JUNE-2-1(PHISIOTHERAPY CENTRE)
ಹುಣಸೂರು ನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಥಾಪಿಸಿರುವ ಸರ್ಕಾರಿ ಪಿಜಿಯೋಥೆರಪಿ ಕೇಂದ್ರಕ್ಕೆ ಪಢಾಯ್ ಸಂಸ್ಥೆ ಸಿ.ಪಿ.ಚೇರ್‌ಗಳು ಸೇರಿದಂತೆ ವಿವಿಧ ಸಲಕರಣೆಗಳನ್ನು ಹಸ್ತಾಂತರಿಸಲಾಯಿತು.
Published on

ಹುಣಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕಿನ ವಿಶೇಷ ಚೇತನ ಮಕ್ಕಳಿಗಾಗಿ ಸ್ಥಾಪಿಸಿರುವ ಸರ್ಕಾರಿ ಫಿಜಿಯೋಥೆರಪಿ ಕೇಂದ್ರಕ್ಕೆ ಬೆಂಗಳೂರಿನ ಪಢಾಯ್(ಅಈಏಅಅಐ) ಸರ್ಕಾರೇತರ ಸಂಘ ಸಂಸ್ಥೆ 72 ಸಾವಿರ ರೂ. ಮೌಲ್ಯದ ವಿವಿಧ ಸಲಕರಣೆಗಳನ್ನು ಉಚಿತವಾಗಿ ನೀಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ತಿಳಿಸಿದರು.

ನಗರದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಆವರಣದಲ್ಲಿರುವ ಕೇಂದ್ರದಲ್ಲಿ ಸೋಮವಾರ ಸಲಕರಣೆಗಳನ್ನು ಸ್ವೀಕರಿಸಿ ಮಾತನಾಡಿ, ಫಿಜಿಯೋಥೆರಪಿ ಕೇಂದ್ರವು 2012ರಲ್ಲಿ ಆರಂಭಗೊಂಡಿದ್ದು, ಇದೀಗ 30ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಜವಾಬ್ದಾರಿ ಹೊತ್ತಿರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು(ಬಿಐಇಆರ್‌ಟಿ) ಬೇಸಿಗೆ ರಜೆಯ ವೇಳೆಯೂ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಸಿಗುವಂತೆ ನೋಡಿಕೊಂಡಿದ್ದಾರೆ. ಇದೀಗ ಕೇಂದ್ರಕ್ಕೆ ಅವಶ್ಯವಾಗಿದ್ದ 5 ಸಿ.ಪಿ. ಚೇರ್‌ಗಳು ಮತ್ತು 8 ಸಿ.ಪಿ.ಕಾರ್ನರ್ ಚೇರ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಬಡಕುಟುಂಬದಲ್ಲಿ ವಿಕಲಚೇತನರಾಗಿ ಜನಿಸಿದ ಮಕ್ಕಳಿಗೆ ಆಶಾಕಿರಣವಾಗಿ ಕೇಂದ್ರ ಯಶಸ್ವಿಯಾಗಿ ನಡೆಯುತ್ತಿದೆ. ಬೆಂಗಳೂರಿನ ವೆಲಿಂಗ್‌ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಆ್ಯಂಡ್ ರೀಸರ್ಚ್ ಸಂಸ್ಥೆಯ ನಿರ್ದೇಶಕಿ ಡಾ.ಮಾಧವಿ ಲೋಖಂಡೆ, ಪಢಾಯ್ ಸಂಸ್ಥೆಯ ಸದಸ್ಯ ಮೋಹನ್‌ಕುಮಾರ್ ಮುಂತಾದವರ ಸಹಕಾರವನ್ನು ಇಲಾಖೆ ಎಂದಿಗೂ ಸ್ಮರಿಸುತ್ತದೆ ಎಂದರು.

ಬಿಐಇಆರ್‌ಟಿಗಳಾದ ತ್ರಿನೇಶ್ ಮತ್ತು ಪ್ರಭಾಕರ್ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲೂ ಪಢಾಯ್ ಸಂಸ್ಥೆ 65 ಸಾವಿರ ರೂ.ಮೌಲ್ಯದ ಡೈಪರ್‌ಗಳು, ಏರ್‌ಬ್ಯಾಗ್, ವಾಕರ್‌ಗಳನ್ನು ಉಚಿತವಾಗಿ ನೀಡಿದ್ದರು. 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಕಷ್ಟು ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಆಗಿರುವುದು ಸಮಾಧಾನಕರ ವಿಷಯವಾಗಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ಬಿಐಆರ್‌ಟಿಐಗಳಾದ ಸೋಮಶೇಖರ್, ವೀರಭದ್ರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net