ಮೂಲಸೌಕರ್ಯ ಕಲ್ಪಿಸುವಂತೆ ಪಟ್ಟು

Untitled-2
ಸಮಂದೂರು ಗ್ರಾಮ ಪಂಚಾಯಿತಿ ಎದುರು ಸಿಪಿಐ(ಎಂ) ಸಂಟನೆ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸ್ಥಳಿಯರು ಪ್ರತಿಭಟನೆ ನಡೆಸಿದರು. ಜಿಲ್ಲಾ ಸಮಿತಿ ಸದಸ್ಯ ಕೆ.ಬಾಲರಾಜ್​, ತಾಲೂಕು ಸಮಿತಿ ಸದಸ್ಯ ಹನುಮಯ್ಯ, ಸಮಂದೂರು ಶಾಖೆ ಸದಸ್ಯರು, ಕುವೆಂಪು ನಗರ ಶಾಖೆ ಸದಸ್ಯರು ಭಾಗವಹಿಸಿದ್ದರು.
Published on

ಆನೇಕಲ್ : ಮೂಲ ಸೌಕರ್ಯಗಳಿಗಾಗಿ ಒತ್ತಾಯಿಸಿ ಸಿಪಿಐ (ಎಂ) ಸಂಟನೆಯಿಂದ ಸಮಂದೂರು ಗ್ರಾಮ ಪಂಚಾಯಿತಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಿದ್ದು, ಸರಿಯಾದ ಕೆಲಸ, ಕೂಲಿ ಇಲ್ಲದೆ ಸಾಮಾನ್ಯ ಜನರ ಕೊಂಡುಕೊಳ್ಳುವ ಶಕ್ತಿ ಕುಸಿತಕಂಡಿದೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದಲೂ ಸರಿಯಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಎನ್​.ಮಂಜುನಾಥ್​ ಆಕ್ರೋಶ ವ್ಯಕ್ತಪಡಿಸಿದರು.

ಜನರ ಅಗತ್ಯಗಳಾದ ಮನೆ, ನಿವೇಶನ, ಹಕ್ಕುಪತ್ರ, ಸಮರ್ಪಕ ರಸ್ತೆ, ಕುಡಿಯುವ ನೀರು ಸರಿಯಾಗಿ ದೊರಕುತ್ತಿಲ್ಲ. ಆನೇಕಲ್​ ತಾಲೂಕಿನ ಸರ್ಕಾರಿ ಭೂಮಿಯಲ್ಲಿ ನಿವೇಶನ ರೈತರಿಗೆ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿಗಳಿಂದ ಅರ್ಜಿಗಳನ್ನು ಪಡೆದರೂ ಇದುವರೆಗೂ ನಿವೇಶನ ನೀಡಲು ಮುಂದಾಗುತ್ತಿಲ್ಲ. ಸರ್ಕಾರಿ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡವರಿಗೆ ಅಕ್ರಮ ಸಕ್ರಮದಡಿ ಹಕ್ಕುಪತ್ರ ನೀಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಬಗರ್​ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡದೆ ಒಕ್ಕಲಿಬ್ಬಿಸಲು ಸರ್ಕಾರ ಮುಂದಾಗುತ್ತದೆ ಎಂದರು.

ಗ್ರಂಥಾಲಯ ಕಟ್ಟಡ ಉದ್ಘಾಟಿಸಿ : ಕುವೆಂಪು ನಗರ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಗೊಂಡು ನಾಲ್ಕೆದು ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ. ಕೂಡಲೇ ಗ್ರಂಥಾಲಯ ಆರಂಭಗೊಳ್ಳಬೇಕು. ಈ ಸ್ಥಳದಲ್ಲಿ ವಾರದಲ್ಲಿ ಎರಡು ದಿನ ಹಿರಿಯ ನಾಗರಿಕರಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಸ್ಥಳಾವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸ್ಥಳಿಯ ಸಮಸ್ಯೆಗಳ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಬಲವಂತದ ಭೂಸ್ವಾಧಿನ ಬೇಡ : ರೈತರ ಒಪ್ಪಿಗೆ ಇಲ್ಲದೆ ಬಲವಂತದ ಭೂ ಸ್ವಾಧಿನ ನಿಲ್ಲಿಸಬೇಕು. ಸಮಂದೂರು ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಇದ್ದರೂ ಸರ್ವೇ ಮಾಡದೆ ಭೂಗಳ್ಳರು ಆಕ್ರಮಿಸುತ್ತಿದ್ದಾರೆ. ಈ ಭೂಮಿಯನ್ನು ಸರ್ವೇ ಮಾಡಿ ಇರುವ ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಿ.ಮಹದೇಶ್​ ಆಗ್ರಹಿಸಿದರು. ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರು ಗ್ರಾಮ ಸಭೆಗಳಲ್ಲಿ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಕೂಡಲೇ ಅಧಿಕಾರಿಗಳು, ಇರುವ ಸರ್ಕಾರಿ ಭೂಮಿಯಲ್ಲಿ ಮನೆ ನಿವೇಶನ ಇಲ್ಲದವರನ್ನು ಗುರುತಿಸಿ ನಿವೇಶನ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಗ್ರಾಮಕ್ಕೆ ಸ್ಮಶಾನಭೂಮಿ ಗುರುತಿಸಿ ಅಭಿವೃದ್ಧಿ ಪಡಿಸಬೇಕು. ಇದರ ಜತೆಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ಕೆಲಸ ಕೊಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net