ಬದುಕಿನಲ್ಲಿ ಪಾಲನೆಯಾಗಲಿ ಮಹನೀಯರ ಆದರ್ಶ

CTD BAPUJI-----
Published on

ಚಿತ್ರದುರ್ಗ: ಬುದ್ಧ, ಬಸವವಣ್ಣ ಸೇರಿ ನಾನಾ ಕ್ರಾಂತಿಕಾರಿ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ, ಗುರುಪೂರ್ಣಿಮೆ ಹಾಗೂ ನಿಕಟಪೂರ್ವ ಸೇವಾ ತರಬೇತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು.

ನಿತ್ಯ ಜೀವನದಲ್ಲಿ ದಾರ್ಶನಿಕರನ್ನು ಸ್ಮರಿಸಬೇಕು. ಸಮಾನತೆ, ಸೌಹಾರ್ದತೆಯಿಂದ ಸಾಮರಸ್ಯದ ಬದುಕು ಕಟ್ಟಿಕೊಂಡರೆ ಸಮಾಜ, ದೇಶ, ಜಗತ್ತು ಉಳಿಯುತ್ತದೆ. ಕೆಲಸದಲ್ಲಿ ಶೃದ್ಧೆ ಇದ್ದರೆ ಗುರಿ ಸಾಧನೆ ಸಾಧ್ಯವಾಗಲಿದೆ. ಸಾಧನೆ ಮೆಟ್ಟಿಲು ಹತ್ತುವ ಒಂದು ಕ್ಷಣ ಖುಷಿ ಪಡಬೇಕು. ಹಿಂದಿನದನ್ನು ಮರೆಯಬಾರದು ಎಂದರು.

ಗುರು ಪೂರ್ಣಿಮೆಗೆ ಮಹತ್ವವಿದೆ. ಪಾಠ ಕಲಿಸುವ ಶಿಕ್ಷಕರು, ಮಾರ್ಗದರ್ಶಕರು ಗುರುಗಳಾಗಿರುತ್ತಾರೆ. ಶಿಕ್ಷಕ ವೃತ್ತಿಯ ಬಗೆಗಿನ ಮಹತ್ವ ಅರಿತರೆ ಅದರ ಪಾವಿತ್ರೃತೆ ರಕ್ಷಣೆ ಸಾಧ್ಯ. ವೃದ್ಧರನ್ನು ಮಕ್ಕಳು ಅನಾಥಾಶ್ರಮಕ್ಕೆ ಸೇರಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಡಿಡಿಪಿಐ ಎನ್.ಎಂ. ರಮೇಶ್, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಸಮಯ ಪಾಲನೆ,ಪೂರ್ವಸಿದ್ಧ ತೆ ಕಡೆ ನಿಗಾವಹಿಸಬೇಕು. ಗುರುಗಳ ಸ್ಥಾನ ದೊಡ್ಡದು. ಅತ್ಯಂತ ಪವಿತ್ರವಾದ ಶಿಕ್ಷಕ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಬಿ.ಇಡಿ. ಬಳಿಕ ಶಿಕ್ಷಕರಾಗಬೇಕೆಂದೇನೂ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಹುದ್ದೆಗಳಿಗೆ ನೇಮಕವಾಗಬಹುದು. ಇದಕ್ಕಾಗಿ ದೂರದೃಷ್ಟಿ ಮತ್ತು ಗುರಿಯಿರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಎಂ.ಆರ್. ಜಯಲಕ್ಷ್ಮೀ ಮಾತನಾಡಿ, ತಾಯಿಯೇ ಮೊದಲ ಗುರು. ವ್ಯಾಸ ಮಹರ್ಷಿಗಳ ನೆನಪಿಗಾಗಿ ಗುರು ಪೂರ್ಣಿಮೆ ಆಚರಿಸಲಾಗುತ್ತಿದೆ. ಜಗತ್ತಿಗೆ ಸಾಮರಸ್ಯದ ಅಗತ್ಯವಿದೆ. ಶಿಕ್ಷಕನಿಗೆ ಸೇವಾ ಮನೋಭಾವವಿರಬೇಕು. ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದ್ದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಪ್ರೊ.ಎಚ್.ಎನ್. ಶಿವಕುಮಾರ್, ಉಪನ್ಯಾಸಕರಾದ ಡಾ.ಜಿ. ಹನುಮಂತರೆಡ್ಡಿ, ಪ್ರೊ.ಒ.ಎಂ. ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net